Home ನಮ್ಮ ಜಿಲ್ಲೆ ಕಲಬುರಗಿ ‘ಖುರ್ಚಿ ಕುಸ್ತಿ’ಯಲ್ಲಿ ಉತ್ತರ ಕರ್ನಾಟಕ ಬಳಲುತ್ತಿದೆ: ಯತ್ನಾಳ್

‘ಖುರ್ಚಿ ಕುಸ್ತಿ’ಯಲ್ಲಿ ಉತ್ತರ ಕರ್ನಾಟಕ ಬಳಲುತ್ತಿದೆ: ಯತ್ನಾಳ್

0

ಕಲಬುರಗಿ: ರಾಜ್ಯದ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅತಿವೃಷ್ಟಿ, ಕೃಷಿ ಹಾನಿ ಹಾಗೂ ರೈತರ ಸಂಕಷ್ಟಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ, ಸರ್ಕಾರದ ಚಿತ್ತ ರಾಜಕೀಯ ಕುರ್ಚಿ ವಿವಾದಗಳತ್ತ ಮಾತ್ರ ತಿರುಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇಂದು ಪ್ರಕಟವಾದ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯತ್ನಾಳ್ ಅವರು, “ಉತ್ತರ ಕರ್ನಾಟಕ ಈಗ ಅಕ್ಷರಶಃ ಮಳೆಯಿಂದ ನಲುಗಿದೆ. ಅನ್ನದಾತರು ಕಂಗಾಲಾಗಿದ್ದಾರೆ. ಅಕ್ಕಿ, ಜೋಳ, ಹುರುಳಿ, ಹತ್ತಿ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಆದರೆ ಸರ್ಕಾರ ಈವರೆಗೆ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಮುಂದುವರೆದು, “ಬೆಳೆ ಹಾನಿಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕಾಗಿದ್ದ ಸರ್ಕಾರ ರಾಜಕೀಯ ಕೆಸರಾಟದಲ್ಲಿ ತೊಡಗಿದೆ. ಮುಖ್ಯ ಮಂತ್ರಿ ಮತ್ತು ಉಪ ಮುಖ್ಯ ಮಂತ್ರಿಗಳ ‘ಖುರ್ಚಿ ಕುಸ್ತಿ’ಯಿಂದ ಉತ್ತರ ಕರ್ನಾಟಕ ಜನತೆ ತತ್ತರಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.

ಯತ್ನಾಳ್ ಅವರು ಸರ್ಕಾರದ ಪ್ರಸ್ತುತ ನೀತಿಗಳನ್ನೂ ಪ್ರಶ್ನಿಸಿದ್ದಾರೆ. “ಅತಿವೃಷ್ಟಿ, ನಿರುದ್ಯೋಗ, ವಿದ್ಯಾರ್ಥಿಗಳಿಗೆ ವಯೋಮಿತಿ ಸಡಿಲಿಕೆ, ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ, ರಸ್ತೆ ಗುಂಡಿಗಳಂತಹ ನಿತ್ಯ ಸಮಸ್ಯೆಗಳು ಮುಂದುವರಿದರೂ ಸರ್ಕಾರದ ಗಮನ ಬೇರೆಡೆ ಇದೆ. ಬದಲಿಗೆ ಸರ್ಕಾರ ಆರ್‌ಎಸ್‌ಎಸ್ ನಿಷೇಧ, ಜಾತಿ ಸಮೀಕ್ಷೆ, ಜಿ.ಬಿ.ಎ ರಚನೆ ಹಾಗೂ ಸುರಂಗ ರಸ್ತೆ ಯೋಜನೆಗಳಂತಹ ಅನುಪಯುಕ್ತ ಕಾರ್ಯಗಳಲ್ಲಿ ತೊಡಗಿದೆ. ಇದು ಖಂಡನೀಯ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಸ್ಥಿತಿಗತಿ ಕುರಿತು ಕಾಳಜಿ ವ್ಯಕ್ತಪಡಿಸಿದ ಅವರು, “ಕಲಬುರಗಿ ಜಿಲ್ಲೆಯನ್ನು ತಕ್ಷಣವೇ ಹಸಿಬರಗಾಲ ಪ್ರದೇಶ ಎಂದು ಘೋಷಿಸಿ ಪರಿಹಾರ ನೀಡಬೇಕು. ಜೊತೆಗೆ ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೂ ಸೂಕ್ತ ಪರಿಹಾರ ನೀಡಬೇಕಿದೆ,” ಎಂದು ಆಗ್ರಹಿಸಿದ್ದಾರೆ.

ಅತಿವೃಷ್ಟಿಯಿಂದ ಉತ್ತರ ಕರ್ನಾಟಕದ ಅನೇಕ ಗ್ರಾಮಗಳು ನೀರಿನಡಿ ಮುಳುಗಿದ್ದು, ರೈತರು ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ತ್ವರಿತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನರು ಕೂಡ ಆಗ್ರಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version