ಕಲಬುರಗಿ: ಜಿಲ್ಲೆಯ ಕಮಲನಗರ, ಆಳಂದ, ಅಫಜಲಪುರ ಸೇರಿದಂತೆ ರಾಯಚೂರು ಮತ್ತು ಬೀದರ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮಳೆಯಬ್ಬರ ಉಂಟಾಗಿದೆ. ಕಮಲನಗರ ಬಳಿಯ ನಾರಂಜಾ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ. ಮಹಾರಾಷ್ಟ್ರದ ಧನೆಗಾಂವ್ ಡ್ಯಾಂನಿಂದ ನೀರುಬಿಟ್ಟ ಪರಿಣಾಮವಾಗಿ ಸಂಗಮ ತುಂಬಿ ಹರಿಯುತ್ತಿದೆ.
ಲಿಂಗಸೂಗೂರ ತಾಲೂಕಿನಲ್ಲಿ ರವಿವಾರ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಗ್ರಾಮಿಣ ಭಾಗದಲ್ಲಿ ನೀರು ಹೊಕ್ಕಿ ಹಳ್ಳ ದಂತಾಗಿದ್ದು, ಕೆಲ ಮನೆಗಳಿಗೆ ನೀರು ಹೊಕ್ಕಿದ್ದು ರಾತ್ರಿಯಿಡಿ ಜನರು ಭಯ ಭೀತರಾಗಿದ್ದಾರೆ.
ಮಳೆಯಿಂದ ಈಚನಾಳ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು ನೀರಲಕೇರಿಯಿಂದ ಆನೆಹೊಸೂರ ಸೇತುವೆ ಹಳ್ಳದಿಂದ ತುಂಬಿದ್ದರಿಂದ ಸಂಚಾರ ಸ್ಥಗಿತದಿಂದ ಶಾಲಾ ವಿದ್ಯಾರ್ಥಿಗಳು ಪರದಾಡುವಂತೆ ಆಗಿದ್ದು, ಸರ್ಜಾಪುರ ಗ್ರಾಮದಲ್ಲಿ ರಾಶಿ ಮಾಡಿ ಹಾಕಿದ ಸೂರ್ಯಕಾಂತಿ ಜೋಳ ನೀರಿನಲ್ಲಿ ಸಂಪೂರ್ಣ ನೆನೆದು ಹೋಗಿದೆ.
ಆಳಂದ ಅಫಜಲಪುರ ಭಾಗದಲ್ಲಿಯೂ ದಿನವೂ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳ ತುಂಬ ಗುಂಡಿಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ.