Home ನಮ್ಮ ಜಿಲ್ಲೆ Vote Theft: ಮತ ಕಳ್ಳತನದಿಂದಲೇ ಇಂದಿರಾ ಗಾಂಧಿ ಗೆದ್ದಿದ್ದು!

Vote Theft: ಮತ ಕಳ್ಳತನದಿಂದಲೇ ಇಂದಿರಾ ಗಾಂಧಿ ಗೆದ್ದಿದ್ದು!

0

ಶಿವಮೊಗ್ಗ: “ಕಾಂಗ್ರೆಸ್‌ ಮೊದಲಿನಿಂದಲೂ ಮತ ಕಳ್ಳತನ ಮಾಡುತ್ತಲೇ ಬಂದಿದೆ. ಹೀಗಾಗಿ ರಾಹುಲ್‌ ಗಾಂಧಿ ಅಜ್ಜಿ ಕೂಡ ಇದರಿಂದಲೇ ಗೆಲುವು ಸಾಧಿಸಿದ್ದರು” ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದರು.

ಮತ ಕಳ್ಳತನದ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿಚಾರಕ್ಕೆ ಪ್ರತಿಕ್ರಿಯಿಸಿ, “ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗುವ ಮೊದಲೇ ಮತ ಕಳ್ಳತನ ನಡೆದಿತ್ತು. ರಾಜ್ ನಾರಾಯಣ್ ವಿರುದ್ಧ ವಿರುದ್ಧ ರಾಯ್‌ಬರೇಲಿಯಲ್ಲಿ ಇಂದಿರಾ ಗಾಂಧಿ ಮತ ಕಳ್ಳತನದಿಂದ ಗೆಲುವು ಸಾಧಿಸಿದ್ದರು” ಎಂದರು.

“ಅಲಹಾಬಾದ್ ಹೈಕೋರ್ಟ್ ಇಂದಿರಾ ವಿರುದ್ಧ ತೀರ್ಪು ನೀಡಿತ್ತು. ಇದರಿಂದಾಗಿ ಅವರ ಸದಸ್ಯತ್ವವನ್ನು ರದ್ದು ಮಾಡಲಾಗಿತ್ತು. ಬಳಿಕ ಸುಪ್ರೀಂಕೋರ್ಟ್‌ ಕೂಡ ಅಲಹಾಬಾದ್ ಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು. ಆದರೆ, ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗೆ ಇಳಿಯದೇ ತುರ್ತು ಪರಿಸ್ಥಿತಿ ಹೇರಿದ್ದರು” ಎಂದು ಜ್ಞಾನೇಂದ್ರ ದೂರಿದರು.

“ಈ ಘಟನೆ ನಡೆದು 50 ವರ್ಷ ಆಗಿದೆ. ಜನರು ಮರೆತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ತಿಳಿದುಕೊಂಡಿದ್ದಾರೆ. ಆದರೆ, ಜನರು ಇದನ್ನು ಮರೆತಿಲ್ಲ. ಸುಮ್ಮನೇ ರಾಹುಲ್‌ ಗಾಂಧಿ ತಮ್ಮ ಪ್ರಚಾರಕ್ಕಾಗಿ ಈ ಪ್ರತಿಭಟನೆಯ ನಾಟಕವನ್ನು ಆಡುತ್ತಿದ್ದಾರೆ” ಎಂದು ಮಾಜಿ ಸಚಿವರು ಹೇಳಿದರು.

“ಚುನಾವಣೆ ಮುಗಿದು ಇಷ್ಟು ದಿನಗಳವರೆಗೆ ಏಕೆ ಸುಮ್ಮನೆ ಕುಳಿತಿದ್ದೀರಿ?. ಅಂದೇ ತಕರಾರು ಮಾಡಬಹುದಿತ್ತು. ಇಲ್ಲದಿದ್ದರೆ ಚುನಾವಣೆ ಮುಗಿದು ಮೂರು ತಿಂಗಳ ವರೆಗೂ ತಕರಾರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆಗಲೂ ಇವರು ತಕರಾರು ಮಾಡಲಿಲ್ಲ. ಅಲ್ಲದೇ ಚುನಾವಣಾ ಆಯೋಗ ಮೇಲೆ ಆಪಾದನೆ ಮಾಡುವ ಇವರು ಅಫಿಡವಿಟ್‌ ಸಲ್ಲಿಸಲು ಸಿದ್ಧರಿಲ್ಲ. ಅಂದರೆ ತಮ್ಮ ಮಾತಿನಲ್ಲಿ ತಮಗೆ ನಂಬಿಕೆ ಇಲ್ಲ ಎಂದರ್ಥ ಅಲ್ಲವೇ?” ಎಂದು ಪ್ರಶ್ನಿಸಿದರು.

“ರಾಜ್ಯದಲ್ಲಿಯೂ ಚುನಾವಣಾ ಅಕ್ರಮ ನಡೆದಿದೆ ಎಂದು ರಾಹುಲ್‌ ಆರೋಪ ಮಾಡುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದಾರೆ. ಆಗ ಇಲ್ಲಿ ಯಾವ ಸರಕಾರ ಇತ್ತು?. ಅಂದರೆ ಸಿದ್ದರಾಮಯ್ಯ ಆಡಳಿತದ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆಯೇ?” ಎಂದು ಕೇಳಿದರು.

ದೂರು ಕೊಡದೇ ದೆಹಲಿಗೆ: ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಗುರುವಾರ ಸುದ್ದಿಗೋಷ್ಠಿಯಲ್ಲಿ ಅಂಕಿ-ಸಂಖ್ಯೆ ಸಹಿತವಾಗಿ ದಾಖಲೆ ಬಿಡುಗಡೆ ಮಾಡಿದ್ದರು.

ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್​​​ನಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ಮತ ಕಳ್ಳತನ ವಿರುದ್ಧ ರಾಜ್ಯ ಚುನಾವಣೆ ಆಯೋಗಕ್ಕೆ ದೂರು ಕೂಡ ನೀಡದೇ ರಾಹುಲ್ ದೆಹಲಿಗೆ ಮರಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version