ಗದಗ: ಸಾಂಪ್ರದಾಯಿಕ ಇಂಧನಗಳಿಗೆ ಗುಡ್‌ಬೈ ಹೇಳಲು ರಾಜ್ಯದಲ್ಲಿ ಶೀಘ್ರದಲ್ಲಿಯೇ ನೂತನ ಜೈವಿಕ ಇಂಧನ ನೀತಿ ಜಾರಿಗೊಳಿಸಲಾಗುವುದೆಂದು ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಈ.ಎಸ್. ಸುಧೀಂದ್ರ ಘೋಷಿಸಿದರು.
ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವಿವಿಯಲ್ಲಿ ಬುಧವಾರ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಾಶ್ರಯದಲ್ಲಿ ಬುಧವಾರ ಸದ್ಭಾವನ ದಿವಸ್, ಅಕ್ಷಯ ಊರ್ಜಾ ದಿವಸ್ ಮತ್ತು ವಿಶ್ವ ಜೈವಿಕ ಇಂಧನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನೂತನ ಜೈವಿಕ ಇಂಧನ ನೀತಿ ರಚನೆಗೆ ವಿವಿಧ ಪೂರ್ವಭಾವಿ ಕಾರ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸಲಾಗಿದೆ. ಅನುಷ್ಠಾನ ಪ್ರಕ್ರಿಯೆ ಮಾರ್ಗಸೂಚಿಗಳನ್ನು ಸಿದ್ಧಗೊಳಿಸಲಾಗಿದೆ. ನೂತನ ಜೈವಿಕ ಇಂಧನ ನೀತಿಯು ಇಂಧನ ಕ್ಷೇತ್ರದ ಅಭಿವೃದ್ಧಿಗೆ ವೇಗವರ್ಧಕವಾಗಲಿದೆಯೆಂದು ಹೇಳಿದರು.
ಸದ್ಭಾವನಾ ದಿವಸ್ ಹಾಗೂ ಊರ್ಜಾ ದಿವಸ್ 21ನೇ ಶತಮಾನದ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಹಾಗೂ ಜೀವ ವಿಜ್ಞಾನಕ್ಕೆ ಮುನ್ನುಡಿ ಬರೆದ ದಿನಾಚರಣೆ. ರಾಷ್ಟ್ರೀಯ ಐಕ್ಯತೆ, ಸಾಮಾಜಿಕ ಸೌಹಾರ್ದತೆ ಮತ್ತು ಸಹಿಷ್ಣತೆ ಕುರಿತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದು ಈ ಊರ್ಜಾ ದಿವಸ್ ಮುಖ್ಯ ಉದ್ದೇಶವಾಗಿದೆ. ರಿನೀವಬಲ್ ಎನರ್ಜಿ ಕುರಿತು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದಾಗಿದೆ. ಜೈವಿಕ ಇಂಧನ ಕ್ಷೇತ್ರದ ಉನ್ನತಿಕರಣ ಮತ್ತು ವಾಣಿಜ್ಯೀಕರಣ ಅತ್ಯಗತ್ಯವಾಗಿದೆ. ನೆರೆಯ ರಾಜ್ಯಗಳಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಗಣನೀಯವಾಗಿ ಜೈವಿಕ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ಮಂಡಳಿಯೂ ಸಹ ಈ ದಿಶೆಯಲ್ಲಿ ಕಾರ್ಯಯೋಜನೆ ರೂಪಿಸುವುದು ಅನಿವಾರ್ಯವಾಗಿದೆಯೆಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ್.ವಿ ನಾಡಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾಲಯದ ವಿತ್ತಾಧಿಕಾರಿ ಪ್ರಶಾಂತ್ ಜೆ.ಸಿ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕರಾದ ಡಾ. ರವಿ ಜಡೆ, ಗಿರೀಶ್ ದಿಕ್ಷಿತ್, ಮುಂತಾದವರಿದ್ದರು.
“ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಜೈವಿಕ ಇಂಧನ ಕ್ಷೇತ್ರದಲ್ಲಿ ನಿರೀಕ್ಷಿಸಲಾಗಿದೆ. 3 ಲಕ್ಷಕ್ಕೂ ಹೆಚ್ಚಿನ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಜನೆ, ರೈತರ ಕುಟುಂಬಗಳ ಆದಾಯದ ಹೆಚ್ಚಳ, ಯುವ ಉದ್ದಿಮೆದಾರರಿಗೆ ಪ್ರೋತ್ಸಾಹ ದೊರೆಯಲಿದ್ದು, ಮುಂದಿನ ಐದು ವರ್ಷಗಳು ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಲಿದೆ” ಎಂದು ಈ.ಎಸ್. ಸುಧೀಂದ್ರ ಹೇಳಿದರು.
“ಪುನರ್ಬಳಕೆ ಇಂಧನ ಬಳಕೆ ಇತ್ತೀಚಿಗೆ ಹೆಚ್ಚುತ್ತಿದೆ. ಪರಿಸರ ರಕ್ಷಣೆ ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ಪುನರ್ಬಳಕೆ ಇಂಧನ ಉದ್ದೇಶ ಸಾಕಾರವಾಗಲಿದೆ. ಜೈವಿಕ ಇಂಧನದಿಂದ ವಿದೇಶದಿಂದ ಇಂಧನ ಆಮದು ಕಡಿಮೆ ಆಗಲಿದೆ. ಜೈವಿಕ ಇಂಧನದಿಂದ ಹಸೀರೀಕರಣ ಹೆಚ್ಚಾಗಲಿದೆ” ಎಂದು ಡಿಎಫ್‌ಒ ಸಂತೋಷ ಕೆಂಚಪ್ಪನವರ ಹೇಳಿದರು.
“ಮುಂದಿನ 30 ವರ್ಷಗಳಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಲಿದೆ. ಜೈವಿಕ ಇಂಧನ ಪುನರ್ಬಳಕೆ ಇಂಧನವು ಭವಿಷ್ಯದಲ್ಲಿ ಅನಿವಾರ್ಯತೆ ಆಗಲಿದೆ” ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಹೇಳಿದರು.