ವೀರಶೈವ-ಲಿಂಗಾಯತ ಏಕತಾ ಸಮಾವೇಶಕ್ಕೆ ಸ್ಪಷ್ಟತೆ ಇಲ್ಲ

0
52

ಹುಬ್ಬಳ್ಳಿ: ನೆಹರು ಮೈದಾನದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶ ಮೈಕ್ರೋ ಕಮ್ಯೂನಿಟಿ ಸಮಾವೇಶ. ಏಳು ಸಾವಿರ ಜನರಷ್ಟೇ ಸೇರಿದ್ದು, ನಿರ್ಧಾರವನ್ನೇ ತೆಗೆದುಕೊಂಡಿಲ್ಲ. ಸ್ಪಷ್ಟತೆ ಇಲ್ಲದ ಸಮಾವೇಶ. ಅದಕ್ಕೂ ಪಂಚಮಸಾಲಿ ಸಂಘಕ್ಕೂ ಸಂಬಂಧವಿಲ್ಲ ಎಂದು ಪಂಚಮಸಾಲಿ ಹರಿಹರಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಸಾಮಾಜಿಕ, ಆರ್ಥಿಕ ಮತ್ತು ಸಮೀಕ್ಷೆ ಕಾರ್ಯ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಂಚಮಸಾಲಿಗಳು ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನು ಬರೆಸಬೇಕು ಎಂಬುದರ ಕುರಿತು ಪಂಚಮ ಸಾಲಿಗಳ ಮನೆ ಮನೆಗೆ ಸ್ಟೀಕರ್ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಲಿಂಗಾಯತ ಸ್ವಾಮೀಜಿಗಳು ಭಾಗವಹಿಸಿಲ್ಲ. ಪುರೋಹಿತ ಕೆಲಸ ಮಾಡಿಕೊಂಡಿರುವವರಿಗೆ ಕೇಸರಿ ಬಟ್ಟೆ ಹಾಕಿಸಿ ವೇದಿಕೆಯಲ್ಲಿ ಕೂಡ್ರಿಸಿದ್ದರು. ಸಮಾವೇಶದಲ್ಲಿ ಏನೂ ನಿರ್ಣಯ ಮಾಡಲು ಆಗಿಲ್ಲ. ಏಕೆಂದರೆ ಅವರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ನಮ್ಮಲ್ಲಿ ಸ್ಪಷ್ಟತೆ ಇದೆ. ಪಂಚಮಸಾಲಿಗಳು ಧರ್ಮ ಕಾಲಂ ನಲ್ಲಿ ಹಿಂದು ಎಂದು ಬರೆಸಿ. ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಿ ಎಂದು ಸಮಾಜಕ್ಕೆ ಮನವರಿಕೆ ಮಾಡಿಕೊಡುತ್ತಿದ್ದೇವೆ.

ಸೆ.22 ರಿಂದಲೇ ಸಮೀಕ್ಷೆ ಆರಂಭ ಆಗುತ್ತಿರುವುದರಿಂದ 16 ಜಿಲ್ಲೆಯಲ್ಲಿ ಪ್ರವಾಸ ಮಾಡಿ 30 ಸ್ವಾಮೀಜಿಗಳು ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಸ್ಟೀಕರ್‌ನಲ್ಲಿ ಪಂಚಮಸಾಲಿ ಮೂರು ಪೀಠದ ಸ್ವಾಮೀಜಿಗಳ ಬದಲು ಇಬ್ಬರದ್ದೇ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಚನಾನಂದ ಸ್ವಾಮೀಜಿ, ನಮ್ಮದು ಮತ್ತು ಅಲಗೂರು ಸ್ವಾಮೀಜಿಗಳ ಚಿತ್ರ ಇವೆ.

ಯಾರು ದ್ವಂದ್ವದಲ್ಲಿದ್ದಾರೊ ಅವರ ಚಿತ್ರ ಬಿಟ್ಟು ಸ್ಪಷ್ಟತೆ ಇದ್ದವರ ಚಿತ್ರ ಹಾಕಿದ್ದೇವೆ. ಭಾವ ಚಿತ್ರ ಯಾವುದು ಮುಖ್ಯವಲ್ಲ. ಸಮಾಜದ ಜನರು ಧರ್ಮದ ಕಾಲಂ ನಲ್ಲಿ ಹಿಂದು ಹಾಗೂ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು ಎಂದು ತಿಳಿಸಿದ್ದೇವೆ ಎಂದರು. ವೀರಶೈವ ಲಿಂಗಾಯತ ಎಂಬುದು ಮೈಕ್ರೋ ಕಮ್ಯೂನಿಟಿ. ಪಂಚಮಸಾಲಿ ಎಂಬುದು ಮ್ಯಾಕ್ರೊ ಕಮ್ಯೂನಿಟಿ. ಹೀಗಾಗಿ, ಅವರಿಗೂ ನಮಗೂ ಬಹಳ ವ್ಯತ್ಯಾಸವಿದೆ ಎಂದರು.

Previous articleಜೂಡೋದಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಮಗಳು: ಹಿಮಾಂಶಿ
Next articleಗೊಂದಲ ಸರಿಪಡಿಸಿ ಸಮೀಕ್ಷೆ ನಡೆಸುತ್ತೇವೆ: ಡಿಕೆ ಶಿವಕುಮಾರ್

LEAVE A REPLY

Please enter your comment!
Please enter your name here