Home ನಮ್ಮ ಜಿಲ್ಲೆ ಧಾರವಾಡ ಸಂಗೀತಜ್ಞ ಪಂ. ಶ್ರೀನಿವಾಸ ಜೋಶಿ ಇನ್ನಿಲ್ಲ

ಸಂಗೀತಜ್ಞ ಪಂ. ಶ್ರೀನಿವಾಸ ಜೋಶಿ ಇನ್ನಿಲ್ಲ

0

ಹುಬ್ಬಳ್ಳಿ: ಖ್ಯಾತ ಸಿತಾರ್ ಕಲಾವಿದ ಮತ್ತು ಹಿಂದೂಸ್ತಾನಿ ಸಂಗೀತಜ್ಞ ಪಂಡಿತ್ ಶ್ರೀನಿವಾಸ ಜೋಶಿ (74) ಬುಧವಾರ ನಸುಕಿನ ಜಾವ ನಿಧನರಾದರು. ಹಿಂದೂಸ್ತಾನಿ ಸಿತಾರ್ ವಾದನದಲ್ಲಿ ಅವರು ಕರ್ನಾಟಕದ ಅತ್ಯಂತ ಶ್ರೇಷ್ಠ ದರ್ಜೆಯ ಮತ್ತು ನಮ್ಮ ನಡುವಿನ ಅತೀ ಹಿರಿಯ ಕಲಾವಿದರಾಗಿದ್ದರು. ಅಲ್ಲದೇ ದಕ್ಷಿಣ ಭಾರತದ ಕೆಲವೇ ಕೆಲವು ಸಿತಾರ್ ವಾದಕರಲ್ಲಿ ಅಗ್ರಗಣ್ಯರಾಗಿದ್ದರು. ಜೋಶಿ ನಿಧನದೊಂದಿಗೆ ಸಿತಾರ್ ಕಲಾ ಕ್ಷೇತ್ರದಲ್ಲಿನ ಪ್ರಮುಖ ಕೊಂಡಿಯೊಂದು ಕಳಚಿದಂತಾಯಿತು.

ಹುಬ್ಬಳ್ಳಿಯ ಗೋಕುಲ್ ರೋಡ್ ವೆಂಕಟೇಶ್ವರ ಕಾಲೋನಿಯಲ್ಲಿ ನೆಲೆಸಿದ್ದ ಪಂಡಿತ್ ಶ್ರೀನಿವಾಸ ಜೋಶಿ ಅವರು ಪತ್ನಿ ರಾಧಾ, ಸಿತಾರ್ ವಾದಕರಾದ ಪುತ್ರ ನಿಖಿಲ್ ಜೋಶಿ, ಗಾಯಕಿಯಾಗಿರುವ ಪುತ್ರಿ ಮೇಘಾ ಪ್ರಶಾಂತ್ ದೀಕ್ಷಿತ್ ಸೇರಿದಂತೆ ಅಪಾರ ಬಂಧು ಬಳಗ ಹಾಗೂ ಶಿಷ್ಯಕೋಟಿಯನ್ನು ಅಗಲಿದ್ದಾರೆ.

`ಧಾರವಾಡ ಘರಾಣೆ’ಯ ಖ್ಯಾತ ಸಿತಾರ್ ವಾದಕರಾಗಿದ್ದ ದಿ. ಉಸ್ತಾದ್ ಬಾಲೇಖಾನ್ ಅವರ ನೇರ ಶಿಷ್ಯರಾಗಿದ್ದ ಜೋಶಿ, ಸಮಗ್ರ ಹಿಂದೂಸ್ತಾನಿ ಸಂಗೀತ ಜ್ಞಾನ ಪ್ರಕಾರದ ಪ್ರೌಢ ತಜ್ಞರೂ ಆಗಿದ್ದರು. ಅತ್ಯಂತ ಸರಳ. ಸಜ್ಜನಿಕೆಯ ಕಲಾವಿದರಾಗಿ ಹುಬ್ಬಳ್ಳಿ-ಧಾರವಾಡ ಸಂಗೀತ ಪರಂಪರೆಯ ಮಾರ್ಗದರ್ಶಿ ಶಕ್ತಿಗಳಲ್ಲಿ ಒಬ್ಬರಾಗಿದ್ದ ಅವರು, ಪ್ರಚಾರ, ಪ್ರಶಸ್ತಿ ಹಾಗೂ ಸನ್ಮಾನಗಳಿಂದ ಸಂಪೂರ್ಣ ದೂರವಿದ್ದರು.

`ಧಾರವಾಡ ಘರಾಣಾ’ ಸಂಗೀತ ಪರಂಪರೆಗೆ ವಿಶಿಷ್ಟ ಕೊಡುಗೆಯನ್ನು ನೀಡಿರುವ ಈ ಕಲಾವಿದ, ದೇಶ- ರಾಜ್ಯದ ಎಲ್ಲೆಡೆ ಸಿತಾರ್ ವಾದನದ ಸವಿ ಹರಿಸಿದ್ದಾರೆ. ಕೋಲ್ಕತ್ತಾ, ದೆಹಲಿ, ಮುಂಬೈ, ಬೆಂಗಳೂರು, ಗ್ವಾಲಿಯರ್, ಆಗ್ರಾ ಸೇರಿದಂತೆ ಪ್ರಮುಖ ನಗರಗಳ ಹೆಸರಾಂತ ಸಂಗೀತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಉತ್ತರ ಕರ್ನಾಟಕ ಹವ್ಯಾಸಿ ರಂಗಭೂಮಿಯಲ್ಲೂ ಸಕ್ರಿಯವಾಗಿದ್ದ ಜೋಶಿ, ಗಿರೀಶ್ ಕಾರ್ನಾಡರ ಹಯವದನ, ಮೃಚ್ಛುಕಟಿಕ ಸೇರಿದಂತೆ ಹಲವಾರು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿ ಗಮನ ಸೆಳೆದಿದ್ದರು. ಇವರು ಸಂಯೋಜನೆ ಮಾಡಿದ ನಾಟಕದ ಹಾಡುಗಳು ಈ ಪ್ರಾಂತ್ಯದಲ್ಲಿ ಭಾರೀ ಜನಪ್ರಿಯತೆ ಪಡೆದಿವೆ. ಭಾವಗೀತೆ, ಜಾನಪದ ಹಾಗೂ ಭಕ್ತಿಗೀತೆಗಳ ಸಂಯೋಜನೆಯಲ್ಲಿ ಇವರದ್ದೇ ಆದ ವೈಶಿಷ್ಟ್ಯವನ್ನು ಹೊಂದಿದ್ದರು. ಪರಿಪೂರ್ಣ ಅರ್ಥದಲ್ಲಿ ಸಂಗೀತಜ್ಞ ಎನಿಸಿಕೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version