ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬ ಅಲ್ಟ್ರಾ ಲೆಫ್ಟಿಸ್ಟ್ ಆಗಿದ್ದಾರೆ. ಜಾತಿ ಜನಗಣತಿ ಎಂದು ಕಳೆದ ಬಾರಿ 400 ಕೋಟಿ ರೂ. ಕಳೆದಿದ್ದಾರೆ. ಈ ಬಾರಿಯೂ 400 ಕೋಟಿ ರೂ. ಕಳೆಯುತ್ತಿದ್ದಾರೆ ಅಷ್ಟೇ. ಅದರ ವಿನಃ ಬೇರೇನೂ ಆಗುವುದಿಲ್ಲ. ಇದಕ್ಕೆ ಯಾವುದೇ ಮನ್ನಣೆ-ಮಾನ್ಯತೆ ಸಿಗುವುದಿಲ್ಲ ಎಂದು ಕೇಂದ್ರ ಆಹಾರ, ನವೀಕರಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ. ಆ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಮೀಕ್ಷೆಯಷ್ಟೇ. ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅದ್ಯಾವ ಆಧಾರದ ಮೇಲೆ ಜಾತಿ ಸಮೀಕ್ಷೆ ಮಾಡುತ್ತಿದೆ? ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದು ಯಾವ ಆಧಾರ ಮೇಲೆ ಮಾಡಲು ಹೊರಟಿದ್ದೀರಿ? ಎಂದು ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಜಾತಿ ಸಮೀಕ್ಷೆ ಮಾಡಿದರೆ ಒಕ್ಕಲಿಗ ಸಮಾಜದಲ್ಲಿ ತಮ್ಮ ನಾಯಕತ್ವ ಹೋಗಲಿದೆ ಎಂಬ ಸತ್ಯ ಡಿ.ಕೆ ಶಿವಕುಮಾರ ಅವರ ಅರಿವಿಗೆ ಬಂದಿದೆ. ಹೀಗಾಗಿ, ಅವರೂ ಸೇರಿದಂತೆ ಕಾಂಗ್ರೆಸ್‌ನ ಸಚಿವರುಗಳೇ ಇದರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ ಎಂದು ಜೋಶಿ ಪ್ರತಿಕ್ರಿಯಿಸಿದರು.
ಹಿಂದೂ ಸಮಾಜ ಒಡೆಯುವ ಷಡ್ಯಂತ್ರ: ನಕಲಿ ಗಾಂಧಿಗಳ ಅಣತಿಯಂತೆ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರೇರಣೆ, ಸೂಚನೆಯಂತೆ ನುಸುಳುಕೋರರಿಗೆ ‘ವೋಟಿಂಗ್ ಹಕ್ಕು’ ಕೊಟ್ಟು ದೇಶವನ್ನು ಅಶಕ್ತಗೊಳಿಸುವ ಷಡ್ಯಂತ್ರದ ಭಾಗ ಇದಾಗಿದೆ ಎಂದು ಆಕ್ರೋಶ-ಆಕ್ಷೇಪ ವ್ಯಕ್ತಪಡಿಸಿದರು.
ಮತಾಂತರಿಗಳಿಗೆ ಮೀಸಲಾತಿ ಹುನ್ನಾರ: ಕನ್ವರ್ಟ್ ಆದವರಿಗೆ ಮೀಸಲಾತಿಯಿಲ್ಲ ಎಂಬುದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಆದರೆ ಇವರು ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಎಂದು ನಮೂದಿಸಿ ಮೀಸಲಾತಿ ಕೊಡುವ ಹುನ್ನಾರ ನಡೆಸಿದಂತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.