Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ: ನೀವು ಪೈಲಟ್ ಆಗಬಯಸುತ್ತೀರಾ? ಇಲ್ಲಿದೆ ಸುವರ್ಣಾವಕಾಶ

ಹುಬ್ಬಳ್ಳಿ: ನೀವು ಪೈಲಟ್ ಆಗಬಯಸುತ್ತೀರಾ? ಇಲ್ಲಿದೆ ಸುವರ್ಣಾವಕಾಶ

0

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಅಂತಾರಾಷ್ಟ್ರೀಯ ಗುಣಮಟ್ಟದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿಯನ್ನು ಆರಂಭಿಸಿದ್ದು, ಪೈಲಟ್ ಆಗಬಯಸಿದ್ದ ಉತ್ತರ ಕರ್ನಾಟಕ ಭಾಗದ ಯುವಕರ ಆಸೆಗೆ ನೀರೆರೆದಂತಾಗಿದೆ.

ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳನ್ನು ಹುಡುಕಲು, ವಿಶೇಷವಾಗಿ ಪೈಲಟ್ ಆಗಲು ಉತ್ಸಾಹಿಗಳು ಬೆಂಗಳೂರಿನಲ್ಲಿರುವ ಜಕ್ಕೂರು ತರಬೇತಿ ಕೇಂದ್ರಕ್ಕೆ ಅಥವಾ ಇತರ ಮೆಟ್ರೋ ನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಅಲ್ಲಿನ ಖರ್ಚು, ವೆಚ್ಚವನ್ನು ನೋಡಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ತರಬೇತಿ ಪಡೆಯುತ್ತಿದ್ದರು.

ಆದರೆ, ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಹವಾಮಾನ, ನಾಗರಿಕ ಮತ್ತು ಮಿಲಿಟರಿ ವಾಯು ಸಂಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹುಬ್ಬಳ್ಳಿಯಲ್ಲಿ ತರಬೇತಿ ಶಾಲೆ ಆರಂಭಿಸಲು ಹಸಿರು ನಿಶಾನೆ ತೋರಿದೆ.

ದೆಹಲಿ ಮೂಲದ ಏರ್ ಟ್ಯಾಕ್ಸಿ ಅಕಾಡೆಮಿಯು ಉತ್ತರ ಕರ್ನಾಟಕ ಭಾಗದ ಆಸಕ್ತ ಯುವಕರಿಗೆ ತರಬೇತಿ ನೀಡುವ ಮತ್ತು ಪ್ರಪಂಚದಾದ್ಯಂತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಪೈಲಟ್‌ ಆಗಿ ಆಯ್ಕೆಯಾಗುವ ಗುರಿಯೊಂದಿಗೆ ತರಬೇತಿ ನೀಡುವ ಹೊಣೆ ಹೊತ್ತಿದೆ.

ಮೊದಲ ಬ್ಯಾಚ್‌ನಲ್ಲಿನ 9 ವಿದ್ಯಾರ್ಥಿಗಳಿಗೆ ಆನ್-ಗ್ರೌಂಡ್ ತರಬೇತಿ ಆರಂಭವಾಗಿದೆ. ಪ್ರಸ್ತುತ ಅವರು ಕ್ಲಾಸುಗಳಿಗೆ ಹಾಜರಾಗುತ್ತಿದ್ದು, ವಿಮಾನದ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸುತ್ತಿದ್ದಾರೆ. ಸೆಪ್ಟಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾಯೋಗಿಕ ತರಗತಿಗಳು ಆರಂಭವಾಗಲಿವೆಯಂತೆ.

ಸತತ 200 ಗಂಟೆಗಳ ವಿಮಾನ ಚಲಾಯಿಸುವ ತರಬೇತಿಯ ನಂತರ ಅಭ್ಯರ್ಥಿಗಳು ನಾಗರಿಕ ವಿಮಾನಯಾನ ನಿರ್ದೇಶನಾಲಯ ನಡೆಸುವ ಪರೀಕ್ಷೆಗಳನ್ನು ಬರೆಯಲು ಅರ್ಹತೆ ಪಡೆಯುತ್ತಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು ಯಾವುದೇ ವಿಮಾನಯಾನ ಸಂಸ್ಥೆಗಳಲ್ಲಿ ಪೈಲಟ್ ಆಗಿ ಕನಸು ನನಸು ಮಾಡಿಕೊಳ್ಳಬಹುದಾಗಿದೆ.

ವಿಶೇಷ ತರಬೇತಿಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಅವರು ಚಾಲನಾ ಸಂಸ್ಥೆಗೆ ಹ್ಯಾಂಗರ್‌ಗಳನ್ನು ಸ್ಥಾಪಿಸಲು ಮತ್ತು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಿದ್ದಾರೆ.

“ವಿಮಾನ ಹಾರಾಟ ತರಬೇತಿ ಪಡೆಯಲು ಉತ್ತರ ಕರ್ನಾಟಕದ ಜನ ಉತ್ಸುಕತೆ ತೋರುತ್ತಿದ್ದಾರೆ. ನಿರೀಕ್ಷೆಗೂ ಮೀರಿ ವಿಚಾರಣೆಗೆ ಬರುತ್ತಿದ್ದಾರೆ. ಸದ್ಯ ಮೊದಲ ಬ್ಯಾಚ್ ಆರಂಭವಾಗಿದ್ದು, ಅಕ್ಟೋಬರ್ ಎರಡನೇ ವಾರ ಎರಡನೇ ಬ್ಯಾಚ್ ಆರಂಭವಾಗಲಿದೆ”‌ ಎಂದು ಏರ್ ಟ್ಯಾಕ್ಸಿ ಅಕಾಡೆಮಿಯ ಹುಬ್ಬಳ್ಳಿ ಕಾರ್ಯಾಚರಣೆ ಮುಖ್ಯಸ್ಥ ವಿನೋದ ವಿಶ್ವನಾಥನ್ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version