ಧಾರವಾಡ: ನೇಪಾಳದಲ್ಲಿ ಹುಬ್ಬಳ್ಳಿ ಯಾತ್ರಿಕರು ಅತಂತ್ರ

0
49

ಹುಬ್ಬಳ್ಳಿ: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಹುಬ್ಬಳ್ಳಿಯ ಐದು ಯಾತ್ರಾರ್ಥಿಗಳು ಗಲಭೆಗ್ರಸ್ತ ನೇಪಾಳದಲ್ಲಿ ಸಿಲುಕಿದ್ದಾರೆ. ಹಿರಿಯ ಪತ್ರಕರ್ತರಾಗಿದ್ದ ಸುರೇಂದ್ರ ದಾನಿ ಅವರ ಬಂಧುಗಳಾದ ಈ ಐವರು ಸೇರಿದಂತೆ ಒಟ್ಟು ಆರು ಜನ ಯಾತ್ರೆಗೆ ಹೋಗಿದ್ದರು.

ಈ ಪೈಕಿ ಓರ್ವ ವೃದ್ಧರು ಆಮ್ಲಜನಕ ಸಾಲದೇ ಮಾನಸ ಸರೋವರದಲ್ಲಿ ಮಂಗಳವಾರ ಮೃತಪಟ್ಟಿದ್ದು, ಉಳಿದ ಐವರು ಕಷ್ಟಪಟ್ಟು ನೇಪಾಳದ ಕಾಠ್ಮಂಡು ತಲುಪಿ ಲಾಡ್ಜ್ ಒಂದರಲ್ಲಿ ಆಶ್ರಯ ಪಡೆದಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಇವರೆಲ್ಲ ಜಿಲ್ಲಾಡಳಿತ ಮತ್ತು ಸರ್ಕಾರದ ಸಹಾಯ ನಿರೀಕ್ಷೆಯಲ್ಲಿದ್ದಾರೆ. ಇವರುಗಳೆಲ್ಲ ಕೇಶ್ವಾಪುರ ಹಾಗೂ ವಿದ್ಯಾನಗರ ನಿವಾಸಿಗಳು. ಈ ಪೈಕಿ ಒಂದು ಕುಟುಂಬ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ವಾಸಿಸುತ್ತಿದೆ.

ಸತೀಶ್ ಬಿಂದುಮಾಧವ ಕುಲಕರ್ಣಿ, ಸುಂದರಾ ಕುಲಕರ್ಣಿ, ಉದಯ ಕುಮಾರ ದಾನಿ, ಉಮಾ ಉದಯಕುಮಾರ ಹಾಗೂ ವಿದ್ಯಾ ಜೋಶಿ (ಎಲ್ಲರೂ 65 ರಿಂದ 70 ವರ್ಷ ವಯೋಮಾನದವರು) ಸದ್ಯ ಕಾಠ್ಮಂಡುವಿನಲ್ಲಿದ್ದಾರೆ. ಈ ತಂಡದೊಂದಿಗೆ ಇದ್ದ ವಿದ್ಯಾ ಜೋಶಿ ಅವರ ಪತಿ ನರೇಂದ್ರ ಜೋಶಿ (70) ಕೈಲಾಸ ಮಾನಸ ಸರೋವರದಲ್ಲೇ ಪ್ರಾಣಬಿಟ್ಟ ನತದೃಷ್ಟ.

ಮನಕಲಕುವ ಸಂಗತಿ: ಬುಧವಾರ ಬೆಳಿಗ್ಗೆ ಸಂಯುಕ್ತ ಕರ್ನಾಟಕ'ವನ್ನು ಕಾಠ್ಮಂಡುವಿನಿಂದ ಸಂಪರ್ಕಿಸಿದ ಸತೀಶ್ ಕುಲಕರ್ಣಿ ಮನಕಲಕುವ ಘಟನೆಯ ವಿವರಗಳನ್ನು ಬಿಚ್ಚಿಟ್ಟರು.ಬಂಧುಗಳಾದ ನಾವು ಆರು ಜನ ಆಗಸ್ಟ್ 31ರಂದು ಬೆಂಗಳೂರು ಮೂಲಕ ಮಾನಸ ಸರೋವರ ಯಾತ್ರೆಗೆ ಖಾಸಗಿ ಸಂಸ್ಥೆಯೊಂದರ ಪ್ಯಾಕೇಜ್‌ನಲ್ಲಿ ಹೊರಟಿದ್ದೆವು. ಇದು ಒಟ್ಟು ಹದಿನಾಲ್ಕು ದಿನಗಳ ಪ್ಯಾಕೇಜ್ ಪ್ರವಾಸವಾಗಿತ್ತು. ರಾಜ್ಯದ ಇನ್ನಿತರ ಹಲವು ಕನ್ನಡಿಗರೂ ಈ ಪ್ಯಾಕೇಜ್‌ನಲ್ಲಿದ್ದರು. ಮೊದಲ ಹಂತವಾಗಿ ಮಾನಸ ಸರೋವರಕ್ಕೆ ತಲುಪಿದ್ದೆವು.

`ನಮ್ಮ ದುರದೃಷ್ಟಕ್ಕೆ ಸೋಮವಾರ (ಮಂಗಳವಾರ) ನನ್ನ ಷಡ್ಡಕ ನರೇಂದ್ರ ಜೋಶಿ ಮಾನಸ ಸರೋವರದಲ್ಲಿ ಉಸಿರಾಟ ಸಮಸ್ಯೆಯಿಂದ ಮೃತಪಟ್ಟರು. ಹೀಗಾಗಿ ಪ್ಯಾಕೇಜ್‌ನಲ್ಲಿದ್ದ ಇತರ ಕನ್ನಡಿಗರಿಂದ ಬೇರ್ಪಟ್ಟು, ಚೀನಾ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದ ಕಾರ್‌ನಲ್ಲಿ ಶವದೊಂದಿಗೆ ನೇಪಾಳಕ್ಕೆ ಬಂದೆವು.

ಗಡಿಯಲ್ಲಿಯೇ ನಮ್ಮನ್ನು ಪೊಲೀಸರು ತಡೆದರು. ಶವ ಇದೆ, ಸಂಸ್ಕಾರ ಮಾಡಲೇಬೇಕು ಎಂದು ಮನವರಿಕೆ ಮಾಡಿಕೊಡುವುದಕ್ಕೆ ಹರಸಾಹಸಪಟ್ಟೆವು. ನರೇಂದ್ರ ಜೋಶಿ ಅವರ ಶವದೊಂದಿಗೆ ನೇರವಾಗಿ ಪಶುಪತಿನಾಥ ಸ್ಮಶಾನ ತಲುಪಿ ಶವಸಂಸ್ಕಾರ ಮುಗಿಸಿದೆವು. ನಂತರ ರಾತ್ರಿ ಲಾಡ್ಜ್ ತಲುಪಿದಾಗ ಬುಧವಾರ ನಸುಕಿನ ವೇಳೆಯಾಗಿತ್ತು.

`ಈ ನಡುವೆ ಪ್ರತಿಭಟನಾಕಾರರ ಆಕ್ರೋಶಕ್ಕೆ ನಮ್ಮ ಜೊತೆಗಿದ್ದ ಬೇರೊಂದು ಕಾರು ಕಣ್ಣ ಮುಂದೆಯೇ ಬೆಂಕಿಗೆ ಆಹುತಿಯಾಯಿತು. ತುಂಬ ಹೆದರಿಕೆಯಾಯಿತು. ಈಗಲೂ ಪರಿಸ್ಥಿತಿ ಹಾಗೇ ಇದೆ. ನಮ್ಮನ್ನು ಲಾಡ್ಜ್‌ನಿಂದ ಹೊರಬಾರದಂತೆ ಸೂಚಿಸಲಾಗಿದೆ. ಎಲ್ಲ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ತುಂಬ ಭಯದ ವಾತಾವರಣ. ಎದೆ ಹಿಡಿದುಕೊಂಡು ಕೂತಿದ್ದೇವೆ’.

`ಮೂರನೇ ದಿನವಾದ ಇಂದು ನನ್ನ ಷಡ್ಡಕನ ಅಸ್ಥಿ ಸಂಚಯನ ನಡೆಯಬೇಕಿತ್ತು. ಆದರೆ ಪರಿಸ್ಥಿತಿ ಸ್ಪಂದಿಸುತ್ತಿಲ್ಲ. ಮೃತರ ಪತ್ನಿ ಮತ್ತು ನಾವೆಲ್ಲ ಏನೂ ತೋಚದೇ ಅನಾಥರಾಗಿ ಕಾಯುತ್ತಿದ್ದೇವೆ’ ಎಂದು ಸತೀಶ್ ಕುಲಕರ್ಣಿ ವಿವರಿಸಿದರು.

ಈ ಕುರಿತು ಮಾತನಾಡಿರುವ ಹು-ಧಾ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, “ಕಠ್ಮಂಡುವಿನಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು ಹಿರಿಯರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ಯತ್ನಗಳನ್ನು ಮಾಡುತ್ತಿರುವೆ. ಈ ಸಂಬಂಧ ದೆಹಲಿ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿರುವೆ. ಇದು ನನ್ನ ಮೊದಲ ಆದ್ಯತೆ” ಎಂದು ಹೇಳಿದ್ದಾರೆ.

Previous articleದಾಂಡೇಲಿ: ಪ್ರವಾಸೋದ್ಯಮಕ್ಕೆ ಹದಗೆಟ್ಟ ರಸ್ತೆ ಶಾಪ, ಪ್ರವಾಸಿಗರ ಪರದಾಟ
Next articleಕೋಲಾರ: ಸಚಿವ ಲಾಡ್ ಕಾರ್ಯಕ್ರಮ, ಬಾಡಿಗೆ ಆಟೋ ಚಾಲಕರ ಗಲಾಟೆ ನಂತರ ಬಟವಾಡೆ

LEAVE A REPLY

Please enter your comment!
Please enter your name here