Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿ ನೀರು

ಧಾರವಾಡ: ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿ ನೀರು

0

ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಎತ್ತಿ ತುಂಬಿಸುವ ಯೋಜನೆಗೆ ರೂ. 179. 50 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಸಂಪುಟದ ಈ ನಿರ್ಣಯಕ್ಕೆ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಹಾಗೂ ಕಲಘಟಗಿ ವಿಧಾಸಭಾ ಕ್ಷೇತ್ರದ ಶಾಸಕ ಸಂತೋಷ್‌ ಎಸ್‌ ಲಾಡ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಅನ್ನದಾತರ ಬಹುದಿನಗಳ ಬೇಡಿಕೆಯಾಗಿದ್ದ ಹಾಗೂ ಸಂತೋಷ್‌ ಲಾಡ್‌ ಅವರ ಕನಸಾದ ಈ ಏತ ನೀರಾವರಿ ಯೋಜನೆ ಈಗ ಸಾಕಾರಗೊಳ್ಳುತ್ತಿದ್ದು, ಲಾಡ್‌ ಅವರ ನಿರಂತರ ಶ್ರಮ ಹಾಗೂ ಪ್ರಯತ್ನ ಫಲ ಕೊಟ್ಟಂತಾಗಿದೆ. ಈ ನೀರೆತ್ತುವ ಯೋಜನೆಗೆ ಇದೀಗ ಸರ್ಕಾರದಿಂದ ಅನುದಾನ ಬಿಡುಗೆಯಾಗಿದ್ದು, ಸಂಪುಟದಲ್ಲಿ ಅನುಮೋದನೆ ಪಡೆದು ವೇಗ ಸಿಕ್ಕಂತಾಗಿದೆ.

ಬೇಡ್ತಿ ನದಿ: ಬೇಡ್ತಿ ನದಿಯನ್ನು ಗಂಗಾವಳಿ ನದಿ ಎಂದೂ ಕರೆಯುತ್ತಾರೆ. ಇದು ಪಶ್ಚಿಮ ಘಟ್ಟಗಳಿಂದ ಹುಟ್ಟಿಕೊಂಡು, ಧಾರವಾಡದ ದಕ್ಷಿಣ ಭಾಗದಿಂದ ಹರಿದು, ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ನದಿಯು ಮಾಗೋಡ್‌ ಬಳಿ 180 ಮೀಟರ್ ಎತ್ತರದಿಂದ ಹರಿಯುವ ಮಾಗೋಡ್ ಜಲಪಾತಕ್ಕೆ ಹೆಸರುವಾಸಿಯಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಗಂಗಾ-ವೇದಾವತಿ ನದಿ ವ್ಯವಸ್ಥೆಯ ಒಂದು ಭಾಗವಾಗಿದೆ.

ಧಾರವಾಡ ಜಿಲ್ಲೆಯ ಇತರ ತಾಲೂಕಿನಲ್ಲಿನ ಕೆರೆಗಳಿಗೂ ನದಿ ನೀರು: ಅಂತರ್ಜಲ ಮಟ್ಟ ಹೆಚ್ಚಿಸುವ ಶಾಶ್ವತ ನೀರಾವರಿ ಯೋಜನೆ ಇದಾಗಿದ್ದು, ಈ ಭಾಗದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಈ ಕೆರೆ ತುಂಬಿಸುವ ಯೋಜನೆ ಅನುಕೂಲವಾಗಲಿದೆ. ಕೇವಲ ಕಲಘಟಗಿ ತಾಲೂಕು ಮಾತ್ರವಲ್ಲದೆ, ಧಾರವಾಡ ಜಿಲ್ಲೆಯ ಇತರ ತಾಲೂಕಿನಲ್ಲಿನ ಕೆರೆಗಳಿಗೂ ನದಿ ನೀರು ಹರಿಸುವ ಮಹದಾಸೆ ಸಚಿವ ಸಂತೋಷ್‌ ಲಾಡ್‌ ಅವರದ್ದು. ಇದೀಗ ಮೊದಲಾರ್ಧ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಎತ್ತಿ ತುಂಬಿಸುವ 179. 50 ಕೋಟಿ ರೂ ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು ಎಂದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version