Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ: 2ನೇ ಹಂತದ ಫ್ಲೈ ಓವರ್ ಕಾಮಗಾರಿಗೆ ದಿನಗಣನೆ

ಹುಬ್ಬಳ್ಳಿ: 2ನೇ ಹಂತದ ಫ್ಲೈ ಓವರ್ ಕಾಮಗಾರಿಗೆ ದಿನಗಣನೆ

0

ಹರ್ಷ ಕುಲಕರ್ಣಿ

ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಫ್ಲೈ ಓವರ್ 2ನೇ ಹಂತದ ಕಾಮಗಾರಿ ಕುರಿತು ಅಪ್‌ಡೇಟ್ ಇದೆ. ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಕೊಪ್ಪೀಕರ ರಸ್ತೆವರೆಗೂ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಕೊನೆಗೂ ಘಳಿಗೆ ಕೂಡಿಬಂದಿದೆ. ಈ ಸಂಬಂಧ ಮುಂದಿನ ವಾರದಲ್ಲಿ ಉಪನಗರ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಲಾಗುತ್ತಿದ್ದು, ಪಾಲಿಕೆಯವರೆಗಿನ ರಸ್ತೆಯ ಅಗಲೀಕರಣಕ್ಕೆ ಸಿದ್ಧತೆ ಮಾಡಲಾಗುತ್ತಿದೆ.

ಮಿನಿವಿಧಾನಸೌಧ ಪಕ್ಕದ ಉಪನಗರ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಮಹಿಳಾ ಪೊಲೀಸ್ ಠಾಣೆ, ಉತ್ತರ ವಿಭಾಗ ಎಸಿಪಿ ಕಚೇರಿ, ಸಂಚಾರ ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸುತ್ತಿವೆ. ಇದರೊಟ್ಟಿಗೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಪೊಲೀಸ್ ಕಮಿಷನರ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ತಾತ್ಕಾಲಿಕ ಕೊಠಡಿಗಳು ಇವೆ.

ಚನ್ನಮ್ಮ ವೃತ್ತದಿಂದ ಪಾಲಿಕೆಯವರೆಗೆ ನಡೆಯಲಿರುವ ಫ್ಲೈ ಓವರ್ ಕಾಮಗಾರಿಗೆ ಉಪನಗರ ಪೊಲೀಸ್ ಠಾಣೆ ಕಟ್ಟಡ ಶೇ.30ರಷ್ಟು ತೆರವು ಆಗಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಕಚೇರಿಗಳನ್ನು ಜುಲೈ 31ರೊಳಗೆ ಬೇರೆಡೆಗೆ ಸ್ಥಳಾಂತರಿಸಲು ಪಿಡಬ್ಲ್ಯುಡಿ ಇಲಾಖೆ ಸೂಚಿಸಿತ್ತು. ಆದರೆ ವಿಜಯಪುರ ರಸ್ತೆಯಿಂದ ಹೊಸೂರ ಸರ್ಕಲ್‌ವರೆಗಿನ ಫ್ಲೈ ಓವರ್ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾರಣದಿಂದ ಪೊಲೀಸ್ ಇಲಾಖೆಗೆ ಮತ್ತಷ್ಟು ಕಾಲಾವಕಾಶ ಸಿಕ್ಕಂತಾಗಿತ್ತು.

ಆದರೀಗ ಈ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಚನ್ನಮ್ಮ ವೃತ್ತದಿಂದ ಕೊಪ್ಪೀಕರ ರಸ್ತೆಯವರೆಗಿನ ಕಾಮಗಾರಿಗೆ ಚಾಲನೆ ದೊರೆಯಲಿದೆ. ಸ್ಥಳಾಂತರ ಖಚಿತವಾಗಿದ್ದರಿಂದ ಸಂಚಾರ ನಿಯಂತ್ರಣ ಕೊಠಡಿಯ ಬಹುತೇಕ ವ್ಯವಸ್ಥೆಯನ್ನು ನವನಗರದ ಪೊಲೀಸ್ ಕಮಿಷನ‌ರ್ ಕಚೇರಿಯಲ್ಲಿ ಮಾಡಿಕೊಳ್ಳಲಾಗಿದೆ.

ಇನ್ನೊಂದೆಡೆ ಉಪನಗರ ಪೊಲೀಸ್ ಠಾಣೆ ಹಾಗೂ ಮಹಿಳಾ ಠಾಣೆಯನ್ನು ಎಲ್ಲಿಗೆ ಸ್ಥಳಾಂತರ ಮಾಡಬೇಕೆಂಬ ಗೊಂದಲ ಇದೆ. ಸದ್ಯಕ್ಕೆ ಮಹಿಳಾ ಠಾಣೆಯನ್ನು ಗೋಕುಲ್ ರೋಡ್ ಠಾಣೆಗೆ ಅಥವಾ ವಿದ್ಯಾನಗರಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಗೋಕುಲ್ ರೋಡ್‌ಗೆ ಎಸಿಪಿ ಕಚೇರಿಯನ್ನು ಸ್ಥಳಾಂತರಿಸುವ ವಿಚಾರವೂ ಇದೆ.

ಮರಗಳ ಮಾರಣ ಹೋಮ: ಫ್ಲೈ ಓವರ್ ನಿರ್ಮಾಣ ಕಾಮಗಾರಿಗಾಗಿ ಚನ್ನಮ್ಮ ವೃತ್ತದಿಂದ ಲ್ಯಾಮಿಂಗ್ಟನ್ ಶಾಲೆಯ ಪಕ್ಕದಲ್ಲಿರುವ ನಗರಕರ್ ಗ್ರಂಥಾಲಯದವರೆಗಿನ ಬೃಹತ್ ಮರಗಳನ್ನು ಧರೆಗುರುಳಿಸಲಾಗಿದೆ.

ಸುಮಾರು 15ಕ್ಕೂ ಹೆಚ್ಚು ಮರಗಳ ತೆರವು ಕಾರ್ಯಾಚರಣೆ ಕಳೆದೆರಡು ದಿನಗಳಿಂದ ಆರಂಭವಾಗಿದೆ. ಇಷ್ಟು ದಿನ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಪ್ರದೇಶ ಈಗ ಬೋಳು ಬೋಳಾಗಿ ಕಾಣುತ್ತಿದೆ.

ಡಿಸಿಪಿ ಹು-ಧಾ ಪೊಲೀಸ್ ಕಮಿಷನರೇಟ್ ಮಹಾನಿಂಗ ನಂದಗಾವಿ ಮಾತನಾಡಿ, “ಗಣೇಶ ಹಬ್ಬದ ಮುಕ್ತಾಯದ ನಂತರ ಉಪನಗರ, ಮಹಿಳಾ ಪೊಲೀಸ್ ಠಾಣೆ ಸೇರಿದಂತೆ ಎಲ್ಲ ಕಚೇರಿಗಳ ಸ್ಥಳಾಂತರ ಕಾರ್ಯ ಕೈಗೊಳ್ಳಲಾಗುವುದು. ಶಿಫ್ಟಿಂಗ್ ಕುರಿತಾಗಿ ಸ್ಥಳಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ” ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version