ದಾವಣಗೆರೆ: ರಾಜ್ಯ ಸರಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ವೀರಶೈವ-ಲಿಂಗಾಯತರು ಧರ್ಮದ ಕಾಲಂನಲ್ಲಿ ‘ಹಿಂದೂ’ ಹಾಗೂ ಜಾತಿಯ ಕಾಲಂನಲ್ಲಿ ‘ಲಿಂಗಾಯತ ಪಂಚಮಸಾಲಿ’ ಎಂದು ಬರೆಸಬೇಕೆಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರಿಗೆರೆ ಶ್ರೀಗಳು ಕೂಡ ಸಮಾಜಕ್ಕೆ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಿ ಎಂದು ಕರೆ ನೀಡಿದ್ದಾರೆ. ಧರ್ಮದಲ್ಲಿ ಗೊಂದಲ ಉಂಟು ಮಾಡಿಕೊಂಡರೆ ಸರಕಾರದ ಹಣ ವ್ಯರ್ಥವಾಗಲಿದೆ ಎಂದರು.
ರಾಜ್ಯ ಸರಕಾರ ತರಾತುರಿಯಲ್ಲಿ ಸಮೀಕ್ಷೆ ಆರಂಭಿಸಿ ಗೊಂದಲ ಸೃಷ್ಟಿಸಿದೆ. ಈ ಗೊಂದಲ ನಿವಾರಿಸಿ ಸಮೀಕ್ಷೆ ಮಾಡಿದಿದ್ದರೆ ಜನರ ತೆರಿಗೆ ಹಣ ಪೋಲಾಗಲಿದೆ.
ಮೊದಲು 680 ಇದ್ದ ಜಾತಿ ನಂತರ 1400 ಆದವು. ಈಗ 1561 ಜಾತಿಗಳಾಗಿವೆ. ಇದರಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಇದನ್ನು ನಿವಾರಿಸಿ ಸಮೀಕ್ಷೆ ಮಾಡಿದರಷ್ಟೇ ಸಮೀಕ್ಷೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಿಸಿದರು. ಜಾತಿ ಪಟ್ಟಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಶಿಕ್ಷಣ ತಜ್ಞರು ಹಾಗೂ ನುರಿತ ಅನುಭವಿ ರಾಜಕಾರಣಿಗಳಗೊಂಡ ಸಮಿತಿ ರಚಿಸಿ, ಪರಿಷ್ಕರಿಸಿ ಜಾತಿ ಪಟ್ಟಿ ಬಿಡುಗಡೆ ಮಾಡಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ.
ಈಗಲೂ ಇದಕ್ಕೆ ಅವಕಾಶವಿದೆ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮೀಕ್ಷೆ ಕುರಿತು ಕಾಂಗ್ರೆಸ್‌ನ ಎಂಟತ್ತು ಸಚಿವರು ನಮ್ಮೊಂದಿಗೆ ಮಾತನಾಡಿ ನಾವು ಪಕ್ಷದೊಳಗಿರುವುದರಿಂದ ಮಾತನಾಡಲಾಗುತ್ತಿಲ್ಲ. ಹಾಗಾಗಿ, ಸಮಾಜಕ್ಕೆ ನೀವೇ ಸೂಕ್ತ ನಿರ್ದೇಶನ ನೀಡಬೇಕೆಂದು ಹೇಳಿದ್ದಾರೆ.
ಸಿರಿಗೆರೆ ತರಳಬಾಳುಶ್ರೀ ಸೇರಿ ರಾಜ್ಯದ ಎಲ್ಲಾ ಸ್ವಾಮೀಜಿಗಳು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ಬರೆಸುವಂತೆ ಹೇಳಿದ್ದಾರೆ. ಪ್ರತಿಯೊಬ್ಬರೂ ಹಿಂದೂ ವಿಚಾರಧಾರೆಗೆ ಬದ್ಧರಾಗಿರಬೇಕು. ಹಿಂದುತ್ವಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ. ಹಿಂದೂವಿನಲ್ಲೇ ವೈದಿಕ, ಅವೈದಿಕ ಇದೆ. ಇದೊಂದು ಆಲದ ಮರ. ಇದರ ಒಂದು ಟೊಂಗೆ ಲಿಂಗಾಯತ ಎಂದರು.