ದಾವಣಗೆರೆ: ಬಸವರಾಜ ಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿ ವಿಸರ್ಜನೆಯ ಮಾರ್ಗದ ಬದಲಾವಣೆ ಸಂಬಂಧ ಆಯೋಜಕರು ಮತ್ತು ಪೊಲೀಸರ ನಡುವೆ ಉಂಟಾದ ಗೊಂದಲದಿಂದಾಗಿ ಗಣೇಶನ ಮುಖಕ್ಕೆ ಕಪ್ಪು ಬಟ್ಟೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪ್ರತಿವರ್ಷ ಮದೀನಾ ಆಟೋ ನಿಲ್ದಾಣ, ಹಂಸಬಾವಿ ವೃತ್ತದ ಮುಖಾಂತರ ಮೆರವಣಿಗೆ ಸಾಗುತ್ತಿತ್ತು. ಆದರೆ ಕಳೆದ ಮೂರು ವರ್ಷದ ಹಿಂದೆ ಮದೀನಾ ಆಟೋ ನಿಲ್ದಾಣದಲ್ಲಿ ಅನ್ಯಕೋಮಿನವರು ಕಲ್ಲು ತೂರಾಟ ಮಾಡಿದ್ದು ಗಲಭೆ ಸೃಷ್ಟಿಸಿತ್ತು. ಆದ್ದರಿಂದ ಭದ್ರತಾ ದೃಷ್ಟಿಯಿಂದ ಮಾರ್ಗ ರದ್ದು ಮಾಡಿ ಪ್ರತ್ಯೇಕಮಾರ್ಗ ನೀಡಿದ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಆಯೋಜಕರು ನಾವಿರುವುದು ಭಾರತದಲ್ಲಿ ಪಾಕಿಸ್ತಾನದಲ್ಲಲ್ಲ. ನಮ್ಮ ಬಹುಸಂಖ್ಯಾತರ ಭಾವನೆಗೆ ಧಕ್ಕೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.
ಮೊದಲಿನಿಂದಲೂ ಇರುವ ಅದೇ ಮಾರ್ಗ ನೀಡುವಂತೆ ಪಟ್ಟು ಹಿಡಿದ ಯುವಕರು, ಮುಖಂಡರು ಮತ್ತು ಪೊಲೀಸರ ನಡುವೆ ಗಂಟೆಗಳ ಕಾಲ ಹಗ್ಗಹಗ್ಗಾಟ ನಡೆಯಿತು. ಪ್ರತಿ ವರ್ಷ ಹೋಗುವ ಮಾರ್ಗದಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ನೀಡದಿರುವುದಕ್ಕೆ ಗಣೇಶನ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿ, ಕೊನೆಗೂ ಮೆರವಣಿಗೆ ಹಗ್ಗಜಗ್ಗಾಟದಲ್ಲಿಯೇ ನಡೆದು, ಗಣೇಶ ವಿಸರ್ಜನೆಗೊಂಡಿತು.
