ದಾವಣಗೆರೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟದಲ್ಲಿಯೇ ಮುಳುಗಿದ್ದು, ಸಿಎಂ ಕುರ್ಚಿ ಪೈಪೋಟಿ ಇತ್ಯರ್ಥ ಮಾಡಿಕೊಂಡು ಬೆಳಗಾವಿ ಅಧಿವೇಶನಕ್ಕೆ ಬರಬೇಕು, ಇಲ್ಲವಾದರೆ ಬೆಳಗಾವಿ ಅಧಿವೇಶನ ಮುಂದೂಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಹಂಗಾಮಿ ಸಿಎಂ, ಔಟ್‌ಗೋಯಿಂಗ್ ಸಿಎಂ ಬೇಡ ಶಾಶ್ವತ ಮುಖ್ಯಮಂತ್ರಿ ಬೇಕಾಗಿದ್ದಾರೆ. ಹಾಗಾಗಿ, ಬೆಳಗಾವಿ ಅಧಿವೇಶನ ಮುನ್ನ ಕುರ್ಚಿಗೆ ಪರಿಹಾರ ಕಂಡುಕೊಂಡು ಬನ್ನಿ ಎಂದು ಆಗ್ರಹಿಸಿದರು.
ನಿಮ್ಮ ಕುರ್ಚಿ ಕಾಳಾಗದ ಮಧ್ಯೆಯೇ ಅಧಿವೇಶನಕ್ಕೆ ಬಂದ್ರೆ ರೈತರ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತೀರಿ? ರೈತರ ಸಮಸ್ಯೆಗೆ ಪರಿಹಾರ ನೀಡಿ ಅಧಿವೇಶನ ಮಾಡಬೇಕು, ರಾಜ್ಯದಲ್ಲಿ ಸಿಎಂ ಕುರ್ಚಿಗೆ ಕಾಳಗ ನಡೆಯುತ್ತಿರೋ ಬಗ್ಗೆ ಆಡಳಿತ ಪಕ್ಷದವರೇ ಹೇಳುತ್ತಿದ್ದಾರೆ. ನಿಮ್ಮ ಕುರ್ಚಿ ಬಡಿದಾಟಕ್ಕೆ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.
ಇನ್ನೂ ರಾಜ್ಯದ ಮುಖ್ಯಮಂತ್ರಿ ಯಾರೂ ಎಂಬುದನ್ನು ಜನ ತೀರ್ಮಾನ ಮಾಡುತ್ತಿಲ್ಲ. ಈ ವಿಷಯದಲ್ಲಿ ಎಐಸಿಸಿ ಅಧ್ಯಕ್ಷರು, ರಾಜಕಾರಣದಲ್ಲಿ 50 ವರ್ಷಗಳ ಕಾಲ ಅನುಭವವಿರುವ ಮಲ್ಲಿಕಾರ್ಜುನ ಖರ್ಗೆ ಅಸಾಹಯಕರಾಗಿದ್ದಾರೆ. ಎಲ್ಲಿಯೋ ಕೂತು ವಿದೇಶದಲ್ಲಿರುವ ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಿರುವುದು ವಿಪರ್ಯಾಸ ಎಂದರು.


























