ದಾವಣಗೆರೆ: ರಾಜ್ಯದಲ್ಲಿ ಶೇಕಡ 90ರಷ್ಟು ಮಸಿದಿಗಳು ಕಾನೂನುಬಾಹಿರವಾಗಿದ್ದು, ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಇವುಗಳನ್ನು ಸ್ವಚ್ಛ ಮಾಡಲು ಜೆಸಿಬಿ ಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಮರಡಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಸ್ಲಿಂರ ತುಷ್ಠಿಕರಣದಲ್ಲಿಯೇ ಕಾಲಹರಣ ಮಾಡುತ್ತಿದೆ. ಹಿಂದೂ ಮತ್ತು ಮುಸ್ಲಿಂರಿಗೆ ತಾರತಮ್ಯದ ಕಾನೂನು ಯೋಜನೆಗಳನ್ನು ಅನುಸರಿಸುತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಕಾನೂನು ಬಾಹಿರವಾಗಿ ನಡೆಯುತ್ತಿರುವ ಮಸೀದಿಗಳನ್ನು ಜೆಸಿಬಿ ಮುಖಾಂತರ ಸ್ವಚ್ಛಗೊಳಿಸುತ್ತೇವೆ ಎಂದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದಂತೆ ಕರ್ನಾಟಕದಲ್ಲಿ ಜೆಸಿಬಿಯಿಂದ ಎಲ್ಲ ಸ್ವಚ್ಛ ಆಗಲಿದೆ. ಅಕ್ರಮ ಮಸೀದಿ ಸ್ವಚ್ಚ ಮಾಡಲು ಜೆಸಿಬಿ ಬೇಕು, ಎಲ್ಲ ಕಡೆ ಜೆಸಿಬಿ ಸ್ವಾಗತ ಮಾಡುತ್ತಿದ್ದಾರೆ. ನಮ್ಮ ಪ್ರಮಾಣ ವಚನ ನಂತರ ಜಿಸಿಬಿ ಮೂಲಕ ಬೆಂಗಳೂರಿನಲ್ಲಿ ಮೆರವಣಿಗೆ ಎಂದರು.
ಶಾಮನೂರು ಕುಟುಂಬದ ವಿರುದ್ಧ ಯತ್ನಾಳ್ ಕಿಡಿ: ದಾವಣಗೆರೆ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಮಸೀದಿ ಮುಂದೆಯೇ ಫ್ಲೆಕ್ಸ್ ಹಾಕಬೇಕಾ ಅಂತಾ ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಮುಸ್ಲಿಮರು ಮಾತ್ರ ಇವರಿಗೆ ವೋಟ್ ಹಾಕಿ ಗೆಲ್ಲಿಸಿದ್ದಾರಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಾಮನೂರು ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರು. ಬರುವ 2028ರ ಚುನಾವಣೆಯಲ್ಲಿ ಮುಸ್ಲಿಂರು ಮಾತ್ರ ಶಾಮನೂರು ಕಂಪನಿಗೆ ಮತ ಹಾಕ್ತಾರೆ. ಉಳಿದವರು ಬಿಜೆಪಿ, ಹಿಂದೂತ್ವದ ಪಕ್ಷಕ್ಕೆ ಮತ ಹಾಕ್ತಾರೆ ಎಂದು ಟಾಂಗ್ ಕೊಟ್ಟರು.
ಕೇಂದ್ರಕ್ಕೆ ಹೋಗಲ್ಲ: ನಾನಾಗಲಿ, ಈಶ್ವರಪ್ಪ ಆಗಲಿ ಕೇಂದ್ರಕ್ಕೆ ಹೋಗಲ್ಲ. ಇಂಗ್ಲಿಷ್ ಬರೋರು ಕೇಂದ್ರಕ್ಕೆ ಹೋಗಲಿ, ನಮಗೆ ಇಂಗ್ಲಿಷ್ ಬರಲ್ಲ. ನಾವು ಇಲ್ಲೇ ತಾಯಿ ಭುವನೇಶ್ವರಿ ಸೇವೆ ಮಾಡುತ್ತಾ ಇರುತ್ತೇವೆ ಎಂದು ಸ್ಪಷ್ಟನೆ ನೀಡಿದರು. ನಾನು ಯಾವುದೇ ಪಕ್ಷಕ್ಕೆ ಹೋಗಲ್ಲ, ಬೇರೆ ಪಕ್ಷಕ್ಕೆ ಹೋಗೋ ಅವಶ್ಯಕತೆ ಇಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಸತ್ತರೂ ನಾನು ಕಾಂಗ್ರೆಸ್, ಜೆಡಿಎಸ್ ಸೇರಲ್ಲ, ನಾವು ಮುಂದೆ ಏನು ಮಾಡಬೇಕೆಂದು ನಾನು ಈಶ್ವರಪ್ಪ ನಿರ್ಣಯ ಮಾಡಿದ್ದೇವೆ ಎಂದರು.
ನಮ್ಮ ಗಣಪತಿ ಮೇಲೆ ಕಲ್ಲು ಎಸೆಯುತ್ತಾರೆ. ಮಕ್ಕಳು ಉಗೀತಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮ ಮಸೀದಿಗಳ ಎದುರು ಕುಣಿಬೇಡಿ ಅಂತಾರೆ. ಇವರು ಕಟ್ಟಿದ ಶೇಕಡ 99ರಷ್ಟು ಮಸೀದಿಗಳು ಕಾನೂನು ಬಾಹಿರ ಇವೆ. ಉತ್ತರ ಪ್ರದೇಶದಲ್ಲಿ ಜೆಸಿಬಿ ಬಂದಂವತೆ ನಮ್ಮ ಸರ್ಕಾರ ಬಂದರೂ ಜೆಸಿಬಿ ಬರುತ್ತೆ. ಎಲ್ಲಾ ಕಡೆ ಜೆಸಿಬಿನೇ ಎಂದು ಗುಡುಗಿದರು.