ಮಂಗಳೂರು: ರಾಜ್ಯದಲ್ಲಿ ಶೇ.71ರಷ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯತೆ, ಮ್ಯಾಪಿಂಗ್ ಸಮಸ್ಯೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ವಿಳಂಬವಾಗಿದೆ. ಸುಳ್ಯದಲ್ಲಿ ಶೇ.100 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಮಂಗಳೂರಿನಲ್ಲಿ ಶೇ.84ರಷ್ಟು ಸಮೀಕ್ಷೆಯಷ್ಟೇ ನಡೆದಿದೆ ಎಂದರು.
ಸಮೀಕ್ಷೆ ಪೂರ್ಣಕ್ಕೆ ಎರಡು ದಿನವಷ್ಟೇ ಬಾಕಿ ಇದ್ದು, ಮುಂದಿನ ನಿರ್ಧಾರವನ್ನು ಆಯೋಗ ಸೂಚನೆಯ ಮೇರೆಗೆ ಮುಖ್ಯಮಂತ್ರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಶಾಲೆ ನಿಗದಿಯಂತೆ ಬುಧವಾರ ಆರಂಭ: ಒಂದು ವೇಳೆ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ಶಿಕ್ಷಕರು ಶಾಲಾ ಆರಂಭಕ್ಕೆ ಮುನ್ನ ಅಥವಾ ಶಾಲೆ ಬಿಟ್ಟ ಬಳಿಕ ಶನಿವಾರ-ರವಿವಾರ, ರಜಾ ದಿನಗಳಲ್ಲಿ ಸಮೀಕ್ಷೆ ನಡೆಸುವುದು, ಮುಂತಾದ ವಿಷಯಗಳ ಬಗ್ಗೆ ಆಯೋಗದ ಸೂಚನೆಯ ಬಳಿಕ ನಿರ್ಧರಿಸುತ್ತೇವೆ ಎಂದರು. ಇಂದಿನ ವ್ಯವಸ್ಥೆಯಲ್ಲಿ ಸಮೀಕ್ಷೆ ಅತೀ ಮುಖ್ಯ, ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಸಹಕರಿಸಬೇಕು ಎಂದರು.