ಚಿಕ್ಕಬಳ್ಳಾಪುರ(ಗುಡಿಬಂಡೆ): ಬಾಡಿಗೆ ಮನೆಯೊಂದರಲ್ಲಿ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಪೋಲಂಪಲ್ಲಿಯಲ್ಲಿ ನಡೆದಿದೆ.
ಜಂಗಾಲಹಳ್ಳಿ ಮೂಲದ ಅಶ್ವತ್ಥಪ್ಪ (70), ಮತ್ತು ಅವರ ಪತ್ನಿ ಹನುಮಕ್ಕ (60) ಮೃತ ದಂಪತಿ. ಇವರು ಪೋಲಂಪಲ್ಲಿ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ಜೀವನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
ಈ ವೃದ್ಧ ದಂಪತಿ ವಾಸವಿದ್ದ ಮನೆಯ ಬಾಗಿಲು ಕೆಲ ದಿನಗಳಿಂದ ತೆಗೆಯದಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಬೆಳಗ್ಗೆ ಪೊಲೀಸರೇ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದು, ವೃದ್ಧ ದಂಪತಿ ಶವವಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಆರ್ಥಿಕ ಸಂಕಷ್ಟವೋ ಅಥವಾ ಕೌಟುಂಬಿಕ ಕಲಹಗಳ ಪರಿಣಾಮವೋ ಎಂಬ ಕುರಿತು ಪೊಲೀಸರ ತನಿಖೆ ಮುಂದುವರೆದಿದೆ.


























