ಗುಂಡ್ಲುಪೇಟೆಯ ಹುಲಿಯೊಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಹುಲಿ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾದರು ಎಂದು ಅವರನ್ನು ಹುಲಿ ಬೋನಿನಲ್ಲಿ ಜನರು ಕೂಡಿ ಹಾಕಿದ ಘಟನೆ ನಡೆದಿತ್ತು.
ಹುಲಿ ದಾಳಿ ನಡೆಸಿ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಎಳೆದೊಯ್ದ ಘಟನೆ ತಾಲೂಕಿನ ಸೋಮನಪುರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದ್ದು, ಹುಲಿ ಸೆರೆಗೆ ಸಾಕಾನೆ ಮೂಲಕ ಅರಣ್ಯಾಧಿಕಾರಿಗಳು ಕೂಂಬಿಂಗ್ ಆರಂಭಿಸಿದ್ದಾರೆ.
ಗ್ರಾಮದ ಗುರುಸಿದ್ದಶೆಟ್ಟಿ ಎಂಬುವವರು ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದ ವೇಳೆ ಹುಲಿ ಏಕಾಏಕಿ ದಾಳಿ ನಡೆಸಿ ಮೇಕೆಯನ್ನು ಎಳೆದೊಯ್ದಿದೆ. ಇದರಿಂದ ಭಯಭೀತರಾದ ಮಾಲೀಕರು ಕೂಡಲೇ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಂತರ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಜಮೀನಿನಲ್ಲಿ ಬೋನ್ ತಂದಿರಿಸಿ, ಭಗೀರಥ ಸಾಕಾನೆ ಬಳಸಿಕೊಂಡು ಕೂಂಬಿಂಗ್ ಶುರು ಮಾಡಿದ್ದಾರೆ. ಈ ಸಂಬಂಧ ಡಿಆರ್‍ಎಫ್‍ಓ ಶಿವಕುಮಾರ್ ಪ್ರತಿಕ್ರಿಯೆ ನೀಡಿ, “ಸೋಮನಪುರ ಗ್ರಾಮದ ಹೊರ ವಲಯದಲ್ಲಿ ಹುಲಿ ಹೆಜ್ಜೆ ಗುರುತು ಹಾಗೂ ಚಲನವಲನಗಳಆಧರಿಸಿ ಸಾಕಾನೆ ಭಗೀರಥ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಅರಣ್ಯ ಇಲಾಖೆಯಿಂದ ತೀವ್ರ ಶೋಧ ನಡೆಸಲಾಗುತ್ತಿದೆ”ಎಂದು ತಿಳಿಸಿದರು.
ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶಗೊಂಡ ರೈತರು, ಗ್ರಾಮಸ್ಥರು ಹುಲಿ ಸೆರೆಗಾಗಿ ಜಮೀನೊಂದರಲ್ಲಿ ಇಟ್ಟಿದ್ದ ಬೋನಿನಲ್ಲಿ ಸುಮಾರು 12ಕ್ಕೂ ಹೆಚ್ಚು ಅಧಿಕಾರಿಗಳನ್ನು ಕೂಡಿ ಹಾಕಿದ್ದರು. ಈ ಘಟನೆ ಭಾರೀ ಸದ್ದು ಮಾಡಿತ್ತು.
ಕಾಡುಪ್ರಾಣಿಗಳ ಭೀತಿಯಲ್ಲಿ ನಾವು ಜೀವನ ನಡೆಸುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡಿದ್ದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಯನ್ನು ಬೋನಿನಿಂದ ಹೊರಬಿಡುವಂತೆ ಮನವೊಲಿಸಿದ್ದರು.
ಈ ಘಟನೆ ಬಳಿಕ ಹುಲಿಗಾಗಿ ಸಾಕಾನೆ ಸಹಾಯದಿಂದ ಹುಡುಕಾಟ ನಡೆಯುತ್ತಲೇ ಇದೆ. ಆದರೆ ಹುಲಿಯ ಗುರುತು ಪತ್ತೆಯಾಗಿಲ್ಲ. ಹುಲಿ ಚಲನವಲನದ ಮೇಲೆ ನಿಗಾ ವಹಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 15 ಕಡೆಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಿ ತೀವ್ರ ಶೋಧ ನಡೆಸುತ್ತಿದ್ದಾರೆ.