ಮಹದೇಶ್ವರ ಬೆಟ್ಟದಲ್ಲಿ 2025ನೇ ಸಾಲಿನ ಜಾತ್ರಾ ಮಹೋತ್ಸವಕ್ಕೆ ತಯಾರಿ ಆರಂಭವಾಗಿದೆ. ಸೆ. 22ರಂದು ದಸರಾ ಜಾತ್ರೆ, ಅ. 17ರಂದು ದೀಪಾವಳಿ ಜಾತ್ರೆ ನಡೆಯಲಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೆ. 19ರಿಂದ ಮಹಾಲಯ ಜಾತ್ರಾ ಮಹೋತ್ಸವ, ಸೆ. 22ರಿಂದ ದಸರಾ ಜಾತ್ರಾ ಮಹೋತ್ಸವ, ಅ. 17ರಿಂದ ದೀಪಾವಳಿ ಜಾತ್ರಾ ಮಹೋತ್ಸವ, ಅ.27ರಿಂದ ಕಾರ್ತಿಕ ಸೋಮವಾರ ಜಾತ್ರಾ ಮಹೋತ್ಸವಗಳು ನಡೆಯಲಿವೆ.
ಸೆ. 19ರಂದು ಮಹಾಲಯ ಜಾತ್ರೆ ಪ್ರಾರಂಭವಾಗಲಿದ್ದು, 20ರಂದು ಚತುರ್ದಶಿ, ಶ್ರೀಸ್ವಾಮಿಗೆ ಎಣ್ಣೆಮಜ್ಜನ ಸೇವೆ ಹಾಗೂ ವಿಶೇಷ ಸೇವೆ, ಉತ್ಸವಾದಿಗಳು, 21ರಂದು ಮಹಾಲಯ ಅಮಾವಾಸ್ಯೆ, ಶ್ರೀಸ್ವಾಮಿಗೆ ಅಮಾವಾಸ್ಯೆ ವಿಶೇಷ ಸೇವೆ ಮತ್ತು ಉತ್ಸವಾದಿಗಳು ಜರುಗಲಿವೆ.
ದಸರಾ ಜಾತ್ರಾ ಮಹೋತ್ಸವವು ಸೆ. 22ರಿಂದ ಆರಂಭವಾಗಲಿದ್ದು, ಅಂದು ಶರನ್ನವರಾತ್ರಾರಂಭ ಉಯ್ಯಾಲೋತ್ಸವ ಪ್ರಾರಂಭ, ಅ. 1ರಂದು ಮಹಾನವಮಿ, ಆಯುಧ ಪೂಜೆ, 2ರಂದು ವಿಜಯ ದಶಮಿ, ಕುದುರೆ ವಾಹನೋತ್ಸವ, ದಶಮಿ ಪೂಜೆ ಹಾಗೂ ನೈವೇದ್ಯದ ನಂತರ ತೆಪ್ಪೋತ್ಸವ ನಡೆಯಲಿದೆ. ದೀಪಾವಳಿ ಜಾತ್ರಾ ಮಹೋತ್ಸವವು ಅ. 18ರಿಂದ ಆರಂಭವಾಗಲಿದ್ದು, ಅಂದು ಜಾತ್ರೆ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.
19ರಂದು ಶ್ರೀಸ್ವಾಮಿಗೆ ಎಣ್ಣೆಮಜ್ಜನ ಹಾಗೂ ವಿಶೇಷ ಸೇವೆ, ಉತ್ಸವಾದಿಗಳು ನಡೆಯಲಿವೆ. ಅ. 20ರಂದು ನರಕ ಚತುರ್ದಶಿ, ವಿಶೇಷ ಸೇವೆ ಮತ್ತು ಉತ್ಸವಾದಿಗಳು, 21ರಂದು ದೀಪಾವಳಿ ಅಮಾವಾಸ್ಯೆ, ಬೆಳಗ್ಗೆ 9.15ರ ನಂತರ ಹಾಲರುವೆ ಉತ್ಸವ, ವಿಶೇಷ ಸೇವೆ ಮತ್ತು ಉತ್ಸವಾದಿಗಳು.
ಅಕ್ಟೋಬರ್ 22ರಂದು ಬೆಳಿಗ್ಗೆ 9.15 ರಿಂದ 9.55 ಗಂಟೆಯವರೆಗೆ ದೀಪಾವಳಿ ಮಹಾರಥೋತ್ಸವ ನಡೆಯಲಿದೆ. ಅ. 27ರಂದು ಕಾರ್ತಿಕ ಸೋಮವಾರ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ನ. 20ರಂದು ಛಟ್ಟಿ ಅಮಾವಾಸ್ಯೆ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.