Home ನಮ್ಮ ಜಿಲ್ಲೆ ಚಾಮರಾಜನಗರ ಚಾಮರಾಜನಗರ: ಹುಲಿ ಬೋನಿನಲ್ಲಿ ಅರಣ್ಯಾಧಿಕಾರಿಗಳನ್ನು ಕೂಡಿ ಹಾಕಿದ ಜನ!

ಚಾಮರಾಜನಗರ: ಹುಲಿ ಬೋನಿನಲ್ಲಿ ಅರಣ್ಯಾಧಿಕಾರಿಗಳನ್ನು ಕೂಡಿ ಹಾಕಿದ ಜನ!

0

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕಾಡಂಚಿನ ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶಗೊಂಡು ಗ್ರಾಮಸ್ಥರು ಹಾಗೂ ರೈತರು ಹುಲಿ ಸೆರೆಗಾಗಿ ಜಮೀನೊಂದರಲ್ಲಿ ಇಟ್ಟಿದ್ದ ಬೋನಿನಲ್ಲಿ ಸುಮಾರು 12ಕ್ಕೂ ಹೆಚ್ಚು ಅಧಿಕಾರಿಗಳನ್ನು ಕೂಡಿ ಹಾಕಿದಂತಹ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಬಫರ್ ಜೋನ್ ವಲಯ ವ್ಯಾಪ್ತಿಯ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬೊಮ್ಮಲಾಪುರ ಗ್ರಾಮದ ಕೆಇಬಿ ಪಕ್ಕದ ಗಂಗಪ್ಪ ಎಂಬ ರೈತನ ಜಮೀನಿನನ ಸುತ್ತಮುತ್ತಲು ಕೆಲವು ತಿಂಗಳಿಗಳಿಂದ ಹುಲಿ, ಚಿರತೆ ಉಪಟಳ ಹೆಚ್ಚಿದ್ದು, ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡುತಿತ್ತು. ಇದರಿಂದ ಬೇಸತ್ತಿದ್ದ ರೈತರು ಹುಲಿ ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದ ಗಂಗಪ್ಪ ಜಮೀನಿನಲ್ಲಿ ಬೋನು ಇರಿಸಿತ್ತು. ಜೊತೆಗೆ ಕ್ಯಾಮೆರಾ ಅಳವಡಿಸಿ, ಮೂರು ದಿನಗಳ ಕಾಲ ಹುಲಿ ಸೆರೆಗೆ ಕೊಂಬಿಂಗ್ ಸಹ ನಡೆಸಲಾಗಿತ್ತು. ಆದರೆ, ಹುಲಿ ಪತ್ತೆಯಾಗಿರಲಿಲ್ಲ.

ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ: ಜಮೀನಿನಲ್ಲಿ ಬೋನ್ ಇರಿಸಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಮಂಗಳವಾರ ಬೆಳಗ್ಗೆ ಗಂಗಪ್ಪ ಜಮೀನಿನ ಆಸುಪಾಸು ಹುಲಿ ಓಡಾಟ ನಡೆಸಿದ್ದು, ಇದನ್ನು ಕಂಡ ರೈತರು ಆತಂಕಗೊಂಡು ಕೂಡಲೇ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ನಿಗದಿತ ಸಮಯಕ್ಕೆ ಅರಣ್ಯ ಇಲಾಖೆಯವರು ಬಾರದೆ ತಡವಾಗಿ ಆಗಮಿಸಿದ್ದಾರೆ. ಇದರಿಂದ ಕೋಪಗೊಂಡ ರೈತರು ಸುಮಾರು 12ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೋನಿನಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು.

ಹುಲಿಗೆ ಕೂಂಬಿಂಗ್: ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬೋನಿನಲ್ಲಿ ಇರಿಸಿದ ಬಗ್ಗೆ ಮಾಹಿತಿ ಪಡೆದ ಗುಂಡ್ಲುಪೇಟೆ ವಲಯದ ಎಸಿಎಫ್‌ ಸುರೇಶ್‌ ಹಾಗೂ ಬಂಡೀಪುರ ವಲಯದ ಎಸಿಎಫ್‌ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಕಾಡುಪ್ರಾಣಿಗಳ ಭೀತಿಯಲ್ಲಿ ನಾವು ಜೀವನ ನಡೆಸುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಸಿಬ್ಬಂದಿಯನ್ನು ಬೋನಿನಿಂದ ಹೊರಬಿಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವೊಲಿಸಿದರು. ಕೂಡಲೇ ಸಾಕಾನೆ ಬಳಕೆ ಮಾಡಿಕೊಂಡು ಹುಲಿ ಸೆರೆಗೆ ಕೂಂಬಿಂಗ್ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.

ರೈತ ಸಂಘಟನೆ ಆಕ್ರೋಶ: ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಕರುವೊಂದರ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರ ಮಾಹಿತಿ ನೀಡಿದ್ದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಹೊನ್ನೂರು ಪ್ರಕಾಶ್‌ ಸೇರಿದಂತೆ ಹಲವು ಮಂದಿ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿ, ಕೂಡಲೇ ಹುಲಿ ಸೆರೆಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version