Home ನಮ್ಮ ಜಿಲ್ಲೆ ಚಾಮರಾಜನಗರ ಗಣೇಶ ಪ್ರತಿಷ್ಠಾಪನೆ: ಆಯೋಜಕರಿಗೆ ಪ್ರಮುಖ ಸೂಚನೆಗಳು

ಗಣೇಶ ಪ್ರತಿಷ್ಠಾಪನೆ: ಆಯೋಜಕರಿಗೆ ಪ್ರಮುಖ ಸೂಚನೆಗಳು

0

ಚಾಮರಾಜನಗರ: ಗಣೇಶ ಚತುರ್ಥಿ-2025ರ ಸಿದ್ಧತೆಗಳು ಪ್ರಾರಂಭವಾಗಿವೆ. ಆಗಸ್ಟ್ 27ರಂದು ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತದೆ. ಸಾರ್ವಜನಿಕವಾಗಿ ಗಣೇಶೋತ್ಸವ ನಡೆಸಲು ತಯಾರಿಗಳು ನಡೆಯುತ್ತಿವೆ. ಸ್ಥಳೀಯ ಆಡಳಿತಗಳು ಈ ಕುರಿತು ಸೂಚನೆಗಳನ್ನು ನೀಡುತ್ತಿವೆ.

ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ ಗಣೇಶೋತ್ಸವ ಆಚರಣೆ ಸಂಬಂಧ ಅಧಿಕಾರಿಗಳು ಹಾಗೂ ನಗರದ ಶ್ರೀ ವಿದ್ಯಾಗಣಪತಿ ವಿದ್ಯಾಮಂಡಳಿ ಪದಾಧಿಕಾರಿಗಳು, ಮುಖಂಡರೊಂದಿಗೆ ಸಭೆಯನ್ನು ನಡೆಸಿದರು.

ಜಿಲ್ಲೆಯಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ, ಉತ್ಸವದಂತಹ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಅನುಮತಿ ನೀಡುವ ಜೊತೆಗೆ ಹಬ್ಬದ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಎಂದು ನಿರ್ದೇಶನ ನೀಡಿದರು.

ಆಯೋಜಕರಿಗೆ ಪ್ರಮುಖ ಸೂಚನೆ

  • ಗೌರಿ ಗಣೇಶ ಪ್ರತಿಷ್ಠಾಪಿಸುವ ಆಯೋಜಕರಿಗೆ ಅನುಮತಿ ನೀಡುವ ಸಲುವಾಗಿ ಅಧಿಕಾರಿಗಳನ್ನೊಳಗೊಂಡ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ. ಕಾರ್ಯಕ್ರಮಗಳ ಆಯೋಜಕರು ಆಯಾ ತಾಲೂಕು ವ್ಯಾಪ್ತಿಯ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕಿದೆ.
  • ಆಯೋಜಕರು ಅರ್ಜಿ ಸಲ್ಲಿಸಿದ ಕೂಡಲೇ ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು. ಇ-ಮೇಲ್ ಮೂಲಕವು ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಿ ಅನುಮತಿಸಬೇಕು.
  • ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು. ಗಣಪತಿ ವಿಸರ್ಜನೆಗಾಗಿ ನಿಗದಿ ಮಾಡಿರುವ ಸ್ಥಳಗಳಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಗಣಪತಿ ಮೆರವಣಿಗೆ ಮಾರ್ಗಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
  • ಹಬ್ಬದ ವೇಳೆ ಕುಡಿಯುವ ನೀರು, ವಿದ್ಯುತ್, ಸ್ವಚ್ಚತೆ, ಸುರಕ್ಷತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು
  • ಈ ಹಿಂದಿನ ವರ್ಷದಲ್ಲಿಯೂ ಚಾಮರಾಜನಗರ ಪಟ್ಟಣದಲ್ಲಿ ವಿದ್ಯಾಗಣಪತಿ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣಪತಿ ಕಾರ್ಯಕ್ರಮ ಹಾಗೂ ಉತ್ಸವ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಜಿಲ್ಲಾಡಳಿತ ಪೊಲೀಸ್ ಇಲಾಖೆ ಎಲ್ಲ ಸಹಕಾರ ನೀಡಲಿದೆ.
  • ಗಣಪತಿ ವಿಸರ್ಜನೆಗೆ ದೊಡ್ಡರಸನಕೊಳದಲ್ಲಿ ಅಗತ್ಯ ಸಿದ್ದತೆಗೆ ನಗರಸಭೆ ಅಧಿಕಾರಿಗಳು ಎಲ್ಲ ಕ್ರಮಗಳನ್ನು ಮುಂಚಿತವಾಗಿಯೇ ತೆಗೆದುಕೊಳ್ಳಬೇಕು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಮಾತನಾಡಿ, “ಕಳೆದ ವರ್ಷ ನಗರದ ವಿದ್ಯಾಗಣಪತಿ ಮಂಡಳಿಯವರು ಸಹಕಾರ ನೀಡಿ ಗಣಪತಿ ಉತ್ಸವವನ್ನು ಕೈಗೊಂಡಿದ್ದರು. ಈ ಬಾರಿಯೂ ಗಣಪತಿ ಪ್ರತಿಷ್ಠಾಪನೆ ಮೆರವಣಿಗೆ ಸೇರಿದಂತೆ ಉತ್ಸವಕ್ಕೆ ನಮ್ಮ ಕಡೆಯಿಂದ ಎಲ್ಲ ಸಹಕಾರ ನೀಡಲಿದ್ದೇವೆ. ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಬೇಕಿರುವ ಸಿದ್ದತೆಗಳನ್ನು ಮಾಡಲಿದ್ದೇವೆ” ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಮಂಡಳಿಯ ಪದಾಧಿಕಾರಿಗಳು, ಮುಖಂಡರು ಕಳೆದ ಬಾರಿಯೂ ಶಾಂತಿಯುತವಾಗಿ ಗಣೇಶ ಉತ್ಸವ ನಗರದಲ್ಲಿ ಜರುಗಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.

ಈ ಸಲವು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನವರಾತ್ರಿಗೂ ಮೊದಲು ವಿಸರ್ಜನೆ ಕಾರ್ಯವನ್ನು ಹಮ್ಮಿಕೊಳ್ಳಲಿದ್ದೇವೆ. ರಸ್ತೆ ಸೌಕರ್ಯ, ಸ್ವಚ್ಚತೆ, ಬೀದಿ ದೀಪ, ವಿಸರ್ಜನಾ ಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version