ಬೆಂಗಳೂರು: ಈ ವರ್ಷದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳ ಕಣ್ಣಿನ ತಪಾಸಣೆಗಾಗಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿ ಇರುವ ಒಂದು ಆಟದ ರೂಪದ ಪರೀಕ್ಷೆಯನ್ನು ನಡೆಸುವಂತೆ ‘ಟೈಟನ್ ಐ+’ ಕೋರುತ್ತಿದೆ.
ಟೈಟನ್ ಐ+ ಬ್ರ‍್ಯಾಂಡ್ ಈಗ ‘ಏಕ್ ತಾರಾ ಪರೀಕ್ಷೆ’ಯನ್ನು ಆರಂಭಿಸಿದೆ. ಇದು ಬಹಳ ಸರಳವಾದ, ಎಲ್ಲರಿಗೂ ಲಭ್ಯವಾಗುವ ಮತ್ತು ಆಟದ ರೂಪದಲ್ಲಿ ಇರುವ ಕಣ್ಣಿನ ತಪಾಸಣೆಯ ಪರಿಕರವೊಂದನ್ನು ಪಾಲಕರಿಗೆ ನೀಡುತ್ತದೆ.
ಈ ಮೂಲಕ ಅವರು ತಮ್ಮ ಮಕ್ಕಳಲ್ಲಿ ದೃಷ್ಟಿಯ ಸಮಸ್ಯೆ ಇದೆಯೇ ಎಂಬುದನ್ನು ಪ್ರಾಥಮಿಕ ಪರಿಶೀಲನೆಗೆ ಒಳಪಡಿಸಬಹುದು. ಬೇಟೆಗಾರರು ದೃಷ್ಟಿಯ ಪರೀಕ್ಷೆಗೆ ಬಳಸುತ್ತಿದ್ದ ಪಾರಂಪರಿಕವಾದ ವಿಧಾನವೊಂದರಿಂದ ಸ್ಫೂರ್ತಿ ಪಡೆದು ಈ ಪರೀಕ್ಷೆಯನ್ನು ರೂಪಿಸಲಾಗಿದೆ.
ಒಟ್ಟು ಮೂರು ಕೋಟಿಗೂ ಹೆಚ್ಚು ಮಕ್ಕಳು ದೃಷ್ಟಿಯ ದೋಷದಿಂದ ಬಳಲುತ್ತಿದ್ದಾರೆ. ಇದು ಸರಿಯಾಗಿ ಪತ್ತೆಯಾಗುತ್ತಿಲ್ಲ ಹಾಗೂ ಅವರ ಎಳೆಯ ವಯಸ್ಸಿನಲ್ಲಿ ಸಮಸ್ಯೆ ಸೃಷ್ಟಿಸುತ್ತದೆ. ಈ ಸಮಸ್ಯೆಗೆ ಒಂದು ಸೃಜನಶೀಲ ಪ್ರತಿಕ್ರಿಯೆಯ ರೂಪದಲ್ಲಿ ಈ ಪರೀಕ್ಷೆಯನ್ನು ಸಿದ್ಧಪಡಿಸಲಾಗಿದೆ.
ಅಭಿಯಾನದ ವಿವರಣೆಗೆ ಒಂದು ಕಿರುಚಿತ್ರದ ರೂಪದಲ್ಲಿ ಜೀವ ನೀಡಲಾಗಿದೆ. ಈ ಕಿರುಚಿತ್ರದಲ್ಲಿ ಮಂದ ದೃಷ್ಟಿಯ ಸಾಹಿಬಾ ಎಂಬ ಬಾಲಕಿಯ ಕಥೆಯನ್ನು ಹೇಳಲಾಗಿದೆ. ದೃಷ್ಟಿಯ ಸಮಸ್ಯೆಯು ಆಕೆಯ ನಿತ್ಯದ ಬದುಕಿನ ಮೇಲೆ ಪರಿಣಾಮ ಉಂಟುಮಾಡುತ್ತಿತ್ತು.
ದೃಷ್ಟಿಯು ಮಂದವಾಗುವುದು ವಯಸ್ಸಾದವರಲ್ಲಿ ಮಾತ್ರ ಎಂದು ಕೆಲವು ಪಾಲಕರಲ್ಲಿ ಇರುವ ಅಪನಂಬಿಕೆಯನ್ನು ಈ ಕಿರುಚಿತ್ರವು ವಿವರಿಸಿದೆ. ಈ ಅಪನಂಬಿಕೆಯ ಕಾರಣದಿಂದಾಗಿ ಅವರು ತಮ್ಮ ಮಕ್ಕಳ ಕಣ್ಣಿನ ತಪಾಸಣೆಗೆ ಕಾಲಕಾಲಕ್ಕೆ ಮುಂದಾಗುವುದೇ ಇಲ್ಲ.
ಈ ಸಮಸ್ಯೆಯನ್ನು ಮೀರಿ ನಿಲ್ಲಲು ಟೈಟನ್ ಐ+, ಬಹಳ ಹಿಂದಿನ ಕಾಲದಿಂದ ಬಳಕೆಯಲ್ಲಿರುವ ಪದ್ಧತಿಯೊಂದನ್ನು ಆಟದ ರೂಪದ ಹಾಗೂ ಪರಿಣಾಮಕಾರಿಯಾದ ತಪಾಸಣಾ ಪರಿಕರವನ್ನಾಗಿ ಪರಿವರ್ತಿಸಿದೆ.
ಶತಮಾನಗಳ ಹಿಂದೆ ಬೇಟೆಗಾರರ ದೃಷ್ಟಿಯ ಸಾಮರ್ಥ್ಯವನ್ನು ಸಪ್ತರ್ಷಿ ಮಂಡಲದಲ್ಲಿನ ಎರಡು ಭಿನ್ನವಾದ ನಕ್ಷತ್ರಗಳಾದ ಆಲ್ಕರ್ (ಅರುಂಧತಿ) ಮತ್ತು ಮಿಜಾರ್ (ವಸಿಷ್ಠ) ಅನ್ನು ಗುರುತಿಸುವ ಸಾಮರ್ಥ್ಯದ ಮೂಲಕ ಅಳೆಯಲಾಗುತ್ತಿತ್ತು.
ಎರಡೂ ನಕ್ಷತ್ರಗಳನ್ನು ಕಾಣುವ ಸಾಮರ್ಥ್ಯ ಇರುವವರ ಕಣ್ಣು ಬಹಳ ಚುರುಕಾಗಿದೆ ಎಂದು ಪರಿಗಣಿಸಲಾಗುತ್ತಿತ್ತು. ಇದರಿಂದ ಪ್ರೇರಣೆ ಪಡೆದು ‘ಏಕ್ ತಾರಾ ಪರೀಕ್ಷೆ’ಯನ್ನು ಸಿದ್ಧಪಡಿಸಲಾಗಿದೆ. ಇದು ಬಹಳ ಸರಳವಾದ ಪರೀಕ್ಷೆ.
ಇದು ಮಕ್ಕಳಿಗೆ ಸಪ್ತರ್ಷಿ ಮಂಡಲದ ಚುಕ್ಕೆಗಳನ್ನು ಜೋಡಿಸಲು ಹೇಳುತ್ತದೆ. ಇದು ಕನ್ನಡಕದ ಅವಶ್ಯಕತೆ ಇರಬಹುದಾದ ಮಕ್ಕಳ ಕಣ್ಣಿನ ಪ್ರಾಥಮಿಕ ಪರೀಕ್ಷೆ ಇದ್ದಂತೆ. ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು ಭಯಪಡುವವರ ಪಾಲಿಗೆ ಇದು ಬಹಳ ಮಹತ್ವದ್ದಾಗುತ್ತದೆ.
ಈ ಪರೀಕ್ಷೆಯು ಪಾಲಕರಿಗೆ ತಪಾಸಣೆ ಹಾಗೂ ಮುಂದಿನ ಅಗತ್ಯ ಕ್ರಮಗಳ ನಡುವಿನ ಅಂತರವನ್ನು ತುಂಬಲು ನೆರವಾಗುತ್ತದೆ. ಈ ಮೂಲಕ ಇದು, ಮಕ್ಕಳ ದೃಷ್ಟಿಯ ಸಮಸ್ಯೆಯನ್ನು ಪತ್ತೆ ಮಾಡದೆ ಅವರ ಸಾಮರ್ಥ್ಯ ಕುಗ್ಗುವ ಅಪಾಯದ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.
ಟೈಟನ್ ಕಂಪನಿ ಲಿಮಿಟೆಡ್‌ನ ಐಕೇರ್ ವಿಭಾಗದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮನೀಶ್ ಕೃಷ್ಣಮೂರ್ತಿ ಅವರು “ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ದೃಷ್ಟಿಯ ಸಮಸ್ಯೆ ಎದುರಿಸುತ್ತಿದೆ. ಇವರಲ್ಲಿ ಬಹಳಷ್ಟು ಮಂದಿ ಯಾರಿಗೂ ಗೊತ್ತಾಗದ ಬಗೆಯಲ್ಲಿ ಸಮಸ್ಯೆ ಅನುಭವಿಸುತ್ತಿರುತ್ತಾರೆ.
ಈ ವಾಸ್ತವವನ್ನು ಟೈಟನ್ ಐ ಪ್ಲಸ್ ಅಭಿಯಾನವು ಬಹಳ ಭಾವನಾತ್ಮಕವಾಗಿ ತೋರಿಸಿಕೊಟ್ಟಿದೆ. ಅರಿವನ್ನು ಹೆಚ್ಚಿಸಲು ಏಕ್ ತಾರಾ ಪರೀಕ್ಷೆಯನ್ನು ಒಂದು ಸರಳ ಹಾಗೂ ವಿನೂತನ ಪರಿಹಾರ ಕ್ರಮವನ್ನಾಗಿ ನೀಡಲಾಗಿದೆ. ಬಹಳ ಪುರಾತನವಾದ ತಂತ್ರವೊಂದಕ್ಕೆ ಮತ್ತೆ ಜೀವ ನೀಡುವ ಮೂಲಕ ನಾವು ಕುಟುಂಬಗಳಿಗೆ ಒಂದು ಪರಿಹಾರ ಒದಗಿಸುವುದಷ್ಟೇ ಅಲ್ಲದೆ, ಅವರಿಗೊಂದು ಸ್ಮರಣೀಯ ಸಂದರ್ಭ ಸೃಷ್ಟಿಸಿಕೊಡುವ ಕೆಲಸವನ್ನೂ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಒಗಿಲ್ವಿ ಸೌತ್‌ನ ಸಿಸಿಒ (ಚೀಫ್ ಕ್ರಿಯೇಟಿವ್ ಆಫೀಸರ್) ಪುನೀತ್ ಕಪೂರ್ ಅವರು “ಟೈಟನ್ ಐ ಪ್ಲಸ್‌ನ ಏಕ್ ತಾರಾ ಟೆಸ್ಟ್ನ ಪರಿಕಲ್ಪನೆಯು ಹೊಳೆದಿದ್ದು ಬಹಳ ಸರಳವಾದ, ಆಟದ ರೂಪದಲ್ಲಿರುವ ಚಟುವಟಿಕೆಯೊಂದರ ಮೂಲಕ.
ಇಲ್ಲಿ ಬೇಟೆಗಾರರು ಬಳಸುತ್ತಿದ್ದ ಪರೀಕ್ಷೆಯನ್ನು ಮಕ್ಕಳಿಗೆ ಇಷ್ಟವಾಗುವ ನಕ್ಷತ್ರ ನೋಡುವ ಆಟದ ಜೊತೆ ಬೆಸೆಯಲಾಗಿದೆ. ಏಕ್ ತಾರಾ ಪರೀಕ್ಷೆಯಲ್ಲಿ ಪಾರದರ್ಶಕವಾದ ಕಾರ್ಡ್ ಒಂದನ್ನು ಬಳಸಲಾಗುತ್ತದೆ. ಇದರಲ್ಲಿ ರಾತ್ರಿ ವೇಳೆ ಹೊಳೆಯುವ ಕೆಲವು ಗುರುತುಗಳಿರುತ್ತವೆ.
ಇವು ಆಕಾಶ ವೀಕ್ಷಣೆಯನ್ನು ಮೋಜಿನ ಚಟುವಟಿಕೆಯನ್ನಾಗಿಸುತ್ತವೆ. ಇವು ಮಕ್ಕಳಿಗೆ ಸಪ್ತರ್ಷಿ ಮಂಡಲದಲ್ಲಿ ನಕ್ಷತ್ರ ಗುರುತಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಕುತೂಹಲವನ್ನು ತಪಾಸಣೆಯನ್ನಾಗಿ ಪರಿವರ್ತಿಸುತ್ತದೆ, ದೋಷಗಳು ಇದ್ದರೆ ಅದನ್ನು ಬೇಗನೆ ಗುರುತಿಸಿ, ಚಿಕಿತ್ಸಾ ಕ್ರಮಗಳನ್ನು, ಅಗತ್ಯ ಕನ್ನಡಕಗಳನ್ನು ಆರಂಭದಲ್ಲೇ ಸೂಚಿಸಲು ಸಹಾಯ ಆಗುತ್ತದೆ” ಎಂದು ಹೇಳಿದ್ದಾರೆ.
