ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ 2025 ಸ್ಪರ್ಧೆಯಲ್ಲಿ ತುಷಾರ್ ಶಾ ಅವರ ‘ಪರ್ಸೀವಿಯಾ’ ಸ್ಮಾರ್ಟ್ ಕನ್ನಡಕ ರಾಷ್ಟ್ರ ಮಟ್ಟದಲ್ಲಿ ಆಯ್ಕೆ
ಬೆಂಗಳೂರು: ದೃಷ್ಟಿಹೀನರಿಗೆ ಸಹಾಯ ಮಾಡುವ ಉದ್ದೇಶದಿಂದ ಎಐ ತಂತ್ರಜ್ಞಾನವನ್ನು ಉಪಯೋಗಿಸಿ ಸ್ಮಾರ್ಟ್ ಕನ್ನಡಕವನ್ನು ಆವಿಷ್ಕರಿಸಿದ ಬೆಂಗಳೂರಿನ ಯುವಕ ತುಷಾರ್ ಶಾ, ಸ್ಯಾಮ್‌ಸಂಗ್‌ನ ರಾಷ್ಟ್ರಮಟ್ಟದ ‘Solve for Tomorrow 2025’ ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ.
ಸ್ಕೇಲರ್ ಸ್ಕೂಲ್ ಆಫ್ ಟೆಕ್ನಾಲಜಿಯ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ತುಷಾರ್, 19ರ ವಯಸ್ಸಿನಲ್ಲಿಯೇ “ಪರ್ಸೀವಿಯಾ (Percevia)” ಎಂಬ ಎಐ ಆಧಾರಿತ ಸ್ಮಾರ್ಟ್ ಕನ್ನಡಕವನ್ನು ನಿರ್ಮಿಸಿದ್ದಾರೆ. ಈ ಸಾಧನವು ದೃಷ್ಟಿಹೀನರಿಗೆ ಧ್ವನಿ ಸೂಚನೆಗಳ ಮೂಲಕ ಸುತ್ತಮುತ್ತಲಿನ ಪರಿಸರವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಆವಿಷ್ಕಾರದ ವೈಶಿಷ್ಟ್ಯಗಳು: ‘ಪರ್ಸೀವಿಯಾ’ ಸ್ಮಾರ್ಟ್ ಕನ್ನಡಕವು ಆಬ್ಜೆಕ್ಟ್ ರೆಕಗ್ನಿಷನ್ ಕ್ಯಾಮೆರಾ, ಆಡಿಯೋ ಸೆನ್ಸರ್ ಮತ್ತು ಎಐ ಆಧರಿತ ಸ್ಪೇಷಿಯಲ್ ಅನಾಲಿಸಿಸ್ ತಂತ್ರಜ್ಞಾನಗಳಿಂದ ನಿರ್ಮಿತವಾಗಿದೆ.
ಈ ಕನ್ನಡಕಗಳು — ಎದುರಿನ ವಸ್ತುಗಳನ್ನು ಗುರುತಿಸುತ್ತವೆ. ದೂರ ಅಂದಾಜಿಸುತ್ತವೆ. ಮಾನವ ಮುಖ ಹಾಗೂ ಧ್ವನಿಗಳನ್ನು ಗುರುತಿಸುತ್ತವೆ. ಸೂಕ್ಷ್ಮ ಕಂಪನ ಅಥವಾ ಧ್ವನಿಯ ಮೂಲಕ ಎಚ್ಚರಿಕೆ ನೀಡುತ್ತವೆ. ಸುತ್ತಲಿನ ವಾತಾವರಣದ “ಸೆನ್ಸರಿ ಮ್ಯಾಪ್” ರಚಿಸಿ ಬಳಕೆದಾರರಿಗೆ ಮಾಹಿತಿ ನೀಡುತ್ತವೆ.
ತುಷಾರ್ ಈ ಸಂದರ್ಭದಲ್ಲಿ ಮಾತನಾಡಿ “ನನ್ನ ಪಕ್ಕದ ಮನೆಯಲ್ಲಿ ದೃಷ್ಟಿಹೀನ ವ್ಯಕ್ತಿಯೊಬ್ಬರಿದ್ದರು. ಅವರ ದಿನನಿತ್ಯದ ಸವಾಲುಗಳು ನನಗೆ ಆವಿಷ್ಕಾರದ ಪ್ರೇರಣೆ ನೀಡಿದವು. ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಯೋಜನೆಯು ನನಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಆತ್ಮವಿಶ್ವಾಸ ನೀಡಿತು,” ಎಂದು ಹೇಳಿದರು.
ತುಷಾರ್ ಈ ಯೋಜನೆಯಲ್ಲಿ Google Gemini 2.0 Flash ಮಾದರಿಯನ್ನು ಸ್ಕ್ರೀನ್ ವಿವರಣೆಗೆ ಬಳಸಿದ್ದು, ಅಂಧ ಸ್ವಯಂಸೇವಕರ ಫೀಡ್ಬ್ಯಾಕ್ ಆಧರಿಸಿ ವಸ್ತು ಮತ್ತು ಮುಖ ಗುರುತಿಸುವ ಡೇಟಾ ಸೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಸ್ಪರ್ಧೆಯ ಹಿನ್ನೆಲೆ: ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಯೋಜನೆ ಭಾರತದೆಲ್ಲೆಡೆ ಯುವ ಪ್ರತಿಭಾವಂತರಿಗೆ ನೈಜ ಸಮಸ್ಯೆಗಳಿಗೆ ತಂತ್ರಜ್ಞಾನ ಆಧರಿತ ಪರಿಹಾರ ಕಂಡುಹಿಡಿಯಲು ವೇದಿಕೆ ಒದಗಿಸುತ್ತದೆ. ಈ ವರ್ಷ ನಾಲ್ಕು ಪ್ರಮುಖ ವಿಷಯಗಳಡಿ ಆಯ್ಕೆಗೊಂಡ ನಾಲ್ಕು ತಂಡಗಳಿಗೆ ಐಐಟಿ ದೆಹಲಿಯಲ್ಲಿ ₹1 ಕೋಟಿ ಇನ್‌ಕ್ಯುಬೇಷನ್ ನೆರವು ನೀಡಲಾಗಿದೆ.
ತುಷಾರ್ ಅವರ ತಂಡ “ಎಐ ಫಾರ್ ಸೆಫರ್, ಸ್ಮಾರ್ಟರ್ ಅಂಡ್ ಇನ್‌ಕ್ಲೂಸಿವ್ ಇಂಡಿಯಾ” ವಿಭಾಗದಲ್ಲಿ ರಾಷ್ಟ್ರ ಮಟ್ಟದ ಗೆಲುವು ಸಾಧಿಸಿದೆ.
“ಮುಂದಿನ ವರ್ಷ ಪರ್ಸೀವಿಯಾವನ್ನು ಹೆಚ್ಚಿನ ಬಳಕೆದಾರರೊಂದಿಗೆ ಪರೀಕ್ಷಿಸಿ, ಒಳಾಂಗಣ ನ್ಯಾವಿಗೇಷನ್ ಮತ್ತು ಮೊಬಿಲಿಟಿ ತರಬೇತಿ ಫೀಚರ್‌ಗಳನ್ನು ಸೇರಿಸುವ ಉದ್ದೇಶವಿದೆ. ಈ ಸಾಧನ ಎಲ್ಲರಿಗೂ ಕೈಗೆಟುಕುವ ದರದಲ್ಲಿ ದೊರೆಯಬೇಕು ಎಂಬುದು ನನ್ನ ಕನಸು,” ಎಂದರು.
ತುಷಾರ್ ಗೆಲುವು ಕೇವಲ ಪ್ರಶಸ್ತಿಯಷ್ಟೇ ಅಲ್ಲ — ಭವಿಷ್ಯದಲ್ಲಿ ಸಾವಿರಾರು ದೃಷ್ಟಿಹೀನರಿಗೆ ಬೆಳಕಿನ ಆಶಾಕಿರಣ ನೀಡುವಂತಹ ಪ್ರಾರಂಭವಾಗಿದೆ.
