ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಪರಸ್ತ್ರೀ ಜತೆ ಸಖ್ಯ ಬೆಳೆಸಿ ಫೆಬ್ರವರಿ 12ರಂದು ರಾತ್ರಿ ಸಂತ್ರಸ್ತೆಯ ಬೆಂಬಲಿಗರು ಹಾಗೂ ಗುಮ್ಮಟ ನಗರಿ ಸಮೀಪದ ಗ್ರಾಮದ ನಿವಾಸಿಗಳಿಂದ ಮೈತುಂಬ ಥಳಿಸಿ ಕೊಂಡು ಫಜೀತಿಗೆ ಸಿಲುಕಿದ್ದ ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯನ್ನು ರಕ್ಷಿಸಲು ಅಹೋರಾತ್ರಿ 5 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ರಾಜ್ಯ ಸರಕಾರವನ್ನೇ ಒಂಟಿಗಾಲಿನಲ್ಲಿ ನಿಲ್ಲಿಸುವ ಚಳವಳಿ ನಡೆಸಿದ್ದ ಪ್ರತಿಷ್ಠಿತ ಸ್ವಾಮೀಜಿ ಕುರಿತಂತೆ ಭಾನುವಾರ `ಕದ್ದು ಮಸಾಲೆ ತಿಂದ ಶ್ರೀಗೆ ಜನರ ಪಂಚ್’ ಎಂಬ ಎಕ್ಸ್ಕ್ಲೂಸಿವ್ ವರದಿಯನ್ನು ಸಂ.ಕ. ಪ್ರಕಟಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಸಂಚಲನ ಮೂಡಿದ್ದು, ಘಟನೆ ನಡೆದಾಗ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಇಂಚಿಂಚೂ ಮಾಹಿತಿ ಹಂಚಿಕೊಂಡಿದ್ದಾರೆ.
ಕುತೂಹಲಕರ ಸಂಗತಿ ಎಂದರೆ ಸಂತ್ರಸ್ತೆಯ ಬೆಂಬಲಿಗರು 1.5 ಕೋಟಿ ರೂ.ಗೆ ಬೇಡಿಕೆ ಇಟ್ಟಾಗ 80 ಲಕ್ಷ ರೂ. ಪರಿಹಾರ ಕೊಡುವುದಾಗಿ ಸ್ವಾಮೀಜಿ ಒಪ್ಪಿಕೊಂಡಿದ್ದಲ್ಲದೇ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಂತೆ ಐಪಿಎಸ್ ದರ್ಜೆಯ ಅಧಿಕಾರಿಯೊಬ್ಬರು ಮಧ್ಯಸ್ಥಿಕೆವಹಿಸಿ ಪ್ರಕರಣ ಸುಖಾಂತ್ಯವಾಗುವಂತೆ ಪ್ರಯತ್ನಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗ್ರಾಮದಲ್ಲಿ ಆ ರಾತ್ರಿ ನಡೆದದ್ದೇನು?: ಗುಮ್ಮಟದ ಕೂಗಳತೆಯಲ್ಲಿರುವ ಗ್ರಾಮದಲ್ಲಿ ಫೆ. 10ರಂದೇ ಸ್ವಾಮೀಜಿಯೊಬ್ಬರು ಬೆಂಗಳೂರಿನಿಂದ ಯುವತಿಯೊಬ್ಬಳನ್ನು ಕರೆಸಿಕೊಂಡಿದ್ದರು. ಎರಡು ದಿನಗಳ ಕಾಲ ಇಬ್ಬರೂ ಗ್ರಾಮದ ಮನೆಯೊಂದರಲ್ಲಿ ರಹಸ್ಯವಾಗಿ ಅಡಗಿಕೊಂಡಿದ್ದರು. ಆದರೆ ಎರಡು ದಿನಗಳ ಕಾಲ ಇಬ್ಬರೂ ಸಹಮತದ ಮಾತುಕತೆ ನಡೆಸುತ್ತ ಜತೆಗೆ ಇದ್ದರೂ ಫೆ. 12ರಂದು ರಾತ್ರಿ ಮಾತುಕತೆ ವಿಕೋಪಕ್ಕೆ ಹೋಗಿತ್ತು. ಆ ವೇಳೆ ಸಂತ್ರಸ್ತೆ ಕೆಲವು ಬೆಂಬಲಿಗರನ್ನು ಅಲ್ಲಿಗೆ ಕರೆಸಿಕೊಂಡಿದ್ದಳು. ಯಾವಾಗ ಪ್ರಕರಣ ವಿಕೋಪಕ್ಕೆ ಹೋಯಿತೋ ಸಂತ್ರಸ್ತೆ ಮನೆಯಿಂದ ಹೊರಬಂದು ಸುತ್ತಲಿನ ಜನರನ್ನೆಲ್ಲ ಕೂಗಿ ಕರೆಯಲು ಆರಂಭಿಸಿದಳು. ಆಗ ಸಂತ್ರಸ್ತೆಯ ಬೆಂಬಲಿಗರೂ ಸ್ವಾಮೀಜಿಯನ್ನು ರಸ್ತೆಯಲ್ಲಿ ಎಳೆದಾಡಿ ಹಲ್ಲೆ ನಡೆಸಿದರು. ಆಗ ಸ್ಥಳೀಯರು ವಿಷಯ ಏನೆಂದು ಸ್ವಾಮೀಜಿ ಮತ್ತು ಸಂತ್ರಸ್ತೆಯನ್ನು ಕೂರಿಸಿ ವಿಚಾರಿಸಿದರು. ಆಗ ಮತ್ತೊಂದು ಹಂತದ ಗಲಾಟೆ ಸಂಭವಿಸಿ ಗ್ರಾಮಸ್ಥರು ಸಂತ್ರಸ್ತೆಯ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದರು ಮುಂದಾದರು. ಆಗ ಸ್ವಾಮೀಜಿ, ಯಾರನ್ನೂ ಮುಟ್ಟಬೇಡಿ. ಅವರೆಲ್ಲ ನಮ್ಮವರೇ ಎಂದು ಸಮಜಾಯಿಷಿ ನೀಡಲು ಮುಂದಾದರು. ಆಗ ಆಕ್ರೋಶಗೊಂಡ ಸ್ಥಳೀಯರು ಸ್ವಾಮೀಜಿಯನ್ನು ಸಿಕ್ಕಸಿಕ್ಕ ಕಡೆಗೆಲ್ಲ ಬಾರಿಸಿ ಅಲ್ಲಿಂದ ಹೋಗುವಂತೆ ಪಟ್ಟು ಹಿಡಿದರು.
ಆಗ ಸ್ವಾಮೀಜಿ ಕೂಡಲೇ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಕೊನೆಗೆ ನೆರೆಯ ಜಿಲ್ಲೆಯ ಮತ್ತೊಬ್ಬ ಮಾಜಿ ಸಚಿವರಿಗೆ ಕರೆ ಮಾಡಿ, ವಿಷಯ ತಿಳಿಸಿದರು. ಅಷ್ಟೊತ್ತಿಗಾಗಲೇ ಸ್ಥಳೀಯ ಪ್ರಭಾವಿ ರಾಜಕಾರಣಿಗೆ ವಿಷಯ ತಿಳಿದು ಗ್ರಾಮಾಂತರ ಠಾಣೆಯ ರಾತ್ರಿ ಗಸ್ತು ತಿರುಗುವ ವಾಹನದೊಂದಿಗೆ ಸ್ಥಳಕ್ಕೆ ಧಾವಿಸಿದರು.
ನಂತರ ಸ್ವಾಮೀಜಿ ಮತ್ತು ಸಂತ್ರಸ್ತರನ್ನು ಠಾಣೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮತ್ತೊಂದು ಸುತ್ತು ಹೊಡೆದಾಟ ನಡೆಯಿತು ಎಂದು ಪ್ರತ್ಯಕ್ಷದರ್ಶಿ ಕೆಲವು ಸಾಕ್ಷ್ಯಗಳ ಸಹಿತ ಸಂಯುಕ್ತ ಕರ್ನಾಟಕಕ್ಕೆ ವಿವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೋ ತುಣುಕುಗಳನ್ನು ಡಿಲೀಟ್ ಮಾಡಿಸಿದರು. ಆದರೂ ಕೆಲವರು ಮೊಬೈಲ್ ಪೊಲೀಸರ ಕೈಗೆ ಸಿಗದಂತೆ ದೃಶ್ಯಗಳನ್ನು ಉಳಿಸಿಕೊಂಡಿದ್ದಾರೆ. ನಂತರ ರಾತ್ರಿ ಸರಿಸುಮಾರು ಮೂರು ತಾಸುಗಳ ಕಾಲ ಗ್ರಾಮಾಂತರ ಠಾಣೆಯಲ್ಲಿ ಸಂಧಾನ ಸಭೆ ನಡೆದು ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಲು ಸಂತ್ರಸ್ತೆಯ ಕಡೆಯವರು ಪಟ್ಟು ಹಿಡಿದರು. ಕೊನೆಗೆ ಐಪಿಎಸ್ ಅಧಿಕಾರಿಯೊಬ್ಬರು ಮೊಬೈಲ್ ಮೂಲಕ ಸಂಧಾನ ನಡೆಸಿ, ಪ್ರಕರಣ ದಾಖಲಾಗದಂತೆ ನೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಅಂದು ಟೀ ಶರ್ಟ್ ಮತ್ತು ಬರ್ಮುಡಾ ಧರಿಸಿದ್ದ ಸ್ವಾಮೀಜಿ: ಗ್ರಾಮದಲ್ಲಿ ಸ್ವಾಮೀಜಿ ಮತ್ತು ಸಂತ್ರಸ್ತೆ ನಡುವೆ ಜಗಳ ಆರಂಭವಾದಾಗ ಸ್ಥಳದಲ್ಲಿ ಗುಂಪುಗೂಡಿದ ಸ್ಥಳೀಯರು ಸ್ವಾಮೀಜಿಯನ್ನು ಆರಂಭದಲ್ಲಿ ಗುರುತಿಸಿರಲೇ ಇಲ್ಲ. ಏಕೆಂದರೆ ಸದಾ ಖಾವಿ, ವಿಭೂತಿಧಾರಿ ಆಗಿರುತ್ತಿದ್ದ ಸ್ವಾಮೀಜಿ ಅವತ್ತು ಟೀ-ಶರ್ಟ್ ಮತ್ತು ಬರ್ಮೂಡಾ ಧರಿಸಿದ್ದರು. ಹೀಗಾಗಿ ಸ್ಥಳೀಯರಿಗೆ ಸ್ವಾಮೀಜಿ ಸ್ವತಃ ತಾವೇ ಹೇಳಿಕೊಳ್ಳುವವರೆಗೆ ಯಾರೆಂಬುದು ಗೊತ್ತಾಗಿರಲಿಲ್ಲ. ಆದ ರೆಟೀ-ಶರ್ಟ್ ಹಾಗೂ ಬರ್ಮೂಡಾವನ್ನು ಧರಿಸಿದ ವ್ಯಕ್ತಿ ಸ್ವಾಮೀಜಿ ಎಂಬುದು ಗೊತ್ತಾದ ಮೇಲೆ ಮತ್ತೊಂದು ಸುತ್ತಿನ ಹಲ್ಲೆ ನಡೆಸಿದರು ಎನ್ನಲಾಗಿದೆ.