ಲಾಲ್‌ಬಾಗ್‌ನಲ್ಲಿ ಟನಲ್‌ರೋಡ್ ಯೋಜನೆಗೆ ತೇಜಸ್ವಿ ಸೂರ್ಯ ಕಿಡಿ

0
64

“6 ಎಕರೆ ಅಲ್ಲ, 6 ಇಂಚೂ ಕೊಡೋದಿಲ್ಲ” – ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ನಗರದ ಐತಿಹಾಸಿಕ ಸೊಬಗು ಲಾಲ್‌ಬಾಗ್‌ನ ಭೂಮಿಯನ್ನು ಸುರಂಗ ರಸ್ತೆ (ಟನಲ್ ರೋಡ್) ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಸಾಧ್ಯತೆ ಕುರಿತು ವಿವಾದ ತೀವ್ರಗೊಂಡಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, “ಲಾಲ್‌ಬಾಗ್‌ನ 6 ಎಕರೆ ಮಾತ್ರವಲ್ಲ, 6 ಇಂಚೂ ಜಾಗ ಕೊಡೋದಿಲ್ಲ. ಇದು ಜನರ ಹಿತದ ಪ್ರಾಜೆಕ್ಟ್ ಅಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ಲಾಲ್‌ಬಾಗ್‌ನಲ್ಲಿ ತೇಜಸ್ವಿ ಸೂರ್ಯ ಪರಿಶೀಲನೆ: ಬೆಳಗಿನ ವೇಳೆ ತೇಜಸ್ವಿ ಸೂರ್ಯ ಅವರು ಲಾಲ್‌ಬಾಗ್‌ಗೆ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟನಲ್ ರೋಡ್ ಎನ್ನುವುದು ಅವೈಜ್ಞಾನಿಕ ಯೋಜನೆ. ಬೆಂಗಳೂರಿನ ಹೆಮ್ಮೆಯಾದ ಲಾಲ್‌ಬಾಗ್‌ನನ್ನು ಹಾಳು ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ನಾವು ಯಾವುದೇ ಕಾರಣಕ್ಕೂ ಈ ಯೋಜನೆಗೆ ಅವಕಾಶ ನೀಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಹೈಕೋರ್ಟ್‌ನಲ್ಲಿ ಪಿಐಎಲ್ — ಕಾನೂನು ಹೋರಾಟಕ್ಕೂ ಸಜ್ಜು: ತೇಜಸ್ವಿ ಸೂರ್ಯ ಅವರು, ಟನಲ್‌ರೋಡ್ ಯೋಜನೆ ವಿರುದ್ಧ ಹೈಕೋರ್ಟ್‌ನಲ್ಲಿ ಈಗಾಗಲೇ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (PIL) ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. “ನಾನೇ ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಾದಿಸುತ್ತೇನೆ. ಇದು ಪರಿಸರ, ಇತಿಹಾಸ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆಯ ವಿಚಾರ,” ಎಂದು ಅವರು ಹೇಳಿದರು.

ಲಾಲ್‌ಬಾಗ್‌ನ ಪೈತೃಕ ಬಂಡೆ ಮತ್ತು ಸಾರ್ವಜನಿಕ ಅಭಿಪ್ರಾಯ: ಲಾಲ್‌ಬಾಗ್‌ನಲ್ಲಿರುವ 300 ವರ್ಷ ಹಳೆಯ ಬಂಡೆ ಕುರಿತು ಉಲ್ಲೇಖಿಸುತ್ತಾ ತೇಜಸ್ವಿ ಸೂರ್ಯ ಅವರು ಹೇಳಿದರು, “ಜಿಬಿಐ ಅಧಿಕಾರಿಗಳು ಅಲೈನ್‌ಮೆಂಟ್ ತೋರಿಸಲು ಬಂದಾಗ ಜನರ ಅಭಿಪ್ರಾಯ ಕೇಳದೆ ಹೋದರು. ಲಾಲ್‌ಬಾಗ್‌ನಲ್ಲಿ ಕಮರ್ಷಿಯಲ್ ಕಟ್ಟಡ ಕಟ್ಟಬೇಕಾ? ಇದು ದೇಶದ ಆಸ್ತಿ — ರಿಯಲ್ ಎಸ್ಟೇಟ್ ಮಾಡಲು ಸರ್ಕಾರ ಹೊರಟಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಸ್ಪಷ್ಟನೆ: ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆಯೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಲಾಲ್‌ಬಾಗ್‌ನ ಯಾವುದೇ ಭಾಗವನ್ನು ಭೂಸ್ವಾಧೀನ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಆದರೆ ಅದಾದರೂ ಸಹ ಸರ್ಕಾರದ ಉದ್ದೇಶದ ಕುರಿತು ಜನಸಾಮಾನ್ಯರಲ್ಲಿ ಮತ್ತು ಪರಿಸರ ಹೋರಾಟಗಾರರಲ್ಲಿ ಕಳವಳಗಳು ಮುಂದುವರಿದಿವೆ.

ಬಿಜೆಪಿ ಹೋರಾಟದ ಘೋಷಣೆ: ತೇಜಸ್ವಿ ಸೂರ್ಯ ಅವರು ಮುಂದಿನ ವಾರದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಎಲ್ಲ ಶಾಸಕರು ಲಾಲ್‌ಬಾಗ್‌ಗೆ ಭೇಟಿ ನೀಡಿ, ಜನಾಭಿಪ್ರಾಯ ಸಂಗ್ರಹ ನಡೆಸಲಿದ್ದಾರೆ ಎಂದು ಘೋಷಿಸಿದರು. “ಇದು ಕಾರು ಇಟ್ಟುಕೊಂಡವರಿಗೆ ಮಾತ್ರ ಪ್ರಯೋಜನಕಾರಿ ಪ್ರಾಜೆಕ್ಟ್, ಸಾಮಾನ್ಯ ಜನರಿಗಾಗಿ ಅಲ್ಲ. ಲಾಲ್‌ಬಾಗ್ ಉಳಿಸೋದು ನಮ್ಮ ಧ್ಯೇಯ,” ಎಂದರು.

Previous articleದಾಂಡೇಲಿ: ತಿರಸ್ಕರಿಸಿದ ಅರಣ್ಯ ಕೃಷಿ ಭೂಮಿ ಅರ್ಜಿಗಳ ಮರುಪರಿಶೀಲನೆ
Next articleAI ಬಳಸಿ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆ ಯಶಸ್ವಿ

LEAVE A REPLY

Please enter your comment!
Please enter your name here