ಮೆಟ್ರೋ ದರ ಪರಿಷ್ಕರಣೆ: ತೇಜಸ್ವಿ ಸೂರ್ಯ ವಾಗ್ದಾಳಿ

0
27

ಬೆಂಗಳೂರು: ಮೆಟ್ರೋ ದರ ಪರಿಷ್ಕರಣೆ ವೇಳೆ ಮೂಲಭೂತ ಲೆಕ್ಕಾಚಾರಗಳಲ್ಲೇ ತಪ್ಪು ಮಾಡಿಕೊಂಡಿರುವ ಬಿಎಂಆರ್‌ಸಿಎಲ್ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. “ಬಿಎಂಆರ್‌ಸಿಎಲ್‌ನ ಲೆಕ್ಕಾಚಾರಕ್ಕಿಂತ ಪ್ರೌಢಶಾಲಾ ವಿದ್ಯಾರ್ಥಿಗಳು ಉತ್ತಮ ಗಣಿತ ಮಾಡ್ತಾರೆ!” ಎಂದು ಅವರು ಟೀಕಿಸಿದ್ದಾರೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಪರಿಷ್ಕೃತ ಮೆಟ್ರೋ ದರ ರಚನೆಯಲ್ಲಿನ ಗಂಭೀರ ವೈಪರೀತ್ಯಗಳನ್ನು ತಕ್ಷಣ ಸರಿಪಡಿಸಲು ಆಗ್ರಹಿಸಿದ್ದಾರೆ.

ದೋಷಪೂರಿತ ವರದಿ: ತೇಜಸ್ವಿ ಸೂರ್ಯ ಅವರು ತಮ್ಮ ಪತ್ರದಲ್ಲಿ, “ದೀರ್ಘಕಾಲದ ವಿಳಂಬದ ನಂತರ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿನ ನನ್ನ ಹಸ್ತಕ್ಷೇಪದ ಬಳಿಕ ಬಿಎಂಆರ್‌ಸಿಎಲ್ ಕೊನೆಗೂ ಎಫ್‌ಎಫ್‌ಸಿ (Fair Fare Committee) ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ವರದಿಯಲ್ಲಿ ಅನೇಕ ಮೂಲಭೂತ ಲೆಕ್ಕಾಚಾರಗಳೇ ತಪ್ಪಾಗಿವೆ,” ಎಂದು ಹೇಳಿದ್ದಾರೆ.

ಅವರ ಪ್ರಕಾರ, ಬಿಎಂಆರ್‌ಸಿಎಲ್ 105% ರಷ್ಟು ತರ್ಕಬದ್ಧವಲ್ಲದ ದರ ಹೆಚ್ಚಳವನ್ನು ಜಾರಿಗೆ ತಂದಿದೆ. ಆದರೆ ಎಫ್‌ಎಫ್‌ಸಿ ನೀಡಿದ ಸೂತ್ರವನ್ನು ಸರಿಯಾಗಿ ಅನ್ವಯಿಸಿದರೆ ನಿಜವಾದ ಹೆಚ್ಚಳವು ಕೇವಲ 50-55% ಇರಬೇಕಿತ್ತು.

ಅತಿಯಾದ ವೆಚ್ಚದ ಲೆಕ್ಕ: ತೇಜಸ್ವಿ ಸೂರ್ಯ ಅವರು ತಮ್ಮ ಪತ್ರದಲ್ಲಿ ಇನ್ನೂ ಒಂದು ಗಂಭೀರ ಅಂಶವನ್ನು ಉಲ್ಲೇಖಿಸಿದ್ದಾರೆ — “ಒಂದು ನಿರ್ದಿಷ್ಟ ಸಂದರ್ಭದಲ್ಲಿ ನಿರ್ವಹಣೆ ಮತ್ತು ಆಡಳಿತ ವೆಚ್ಚವನ್ನು 366% ಹೆಚ್ಚಾಗಿದೆ ಎಂದು ಬಿಎಂಆರ್‌ಸಿಎಲ್ ತೋರಿಸಿದೆ. ಆದರೆ ನಿಜವಾದ ಹೆಚ್ಚಳವು ಕೇವಲ 118.5% ಆಗಿರಬೇಕು.” ಅವರು ಇದನ್ನು “ಗಣಿತದ ಮೂಲಭೂತ ತಪ್ಪು” ಎಂದು ಹೇಳಿದ್ದು, ಮೆಟ್ರೋ ಪ್ರಯಾಣಿಕರಿಂದ ಈಗಾಗಲೇ ಹೆಚ್ಚುವರಿ ಮೊತ್ತವನ್ನು ವಸೂಲು ಮಾಡಲಾಗಿದೆ ಎಂದು ಟೀಕಿಸಿದ್ದಾರೆ.

“ಪ್ರಯಾಣಿಕರ ಮೇಲೆ ಅನಗತ್ಯ ಹೊರೆ”: ತೇಜಸ್ವಿ ಸೂರ್ಯ ಅವರ ಪ್ರಕಾರ, ಈ ವರ್ಷದ ಫೆಬ್ರವರಿಯಿಂದಲೇ ಮೆಟ್ರೋ ಪ್ರಯಾಣಿಕರು ಹೆಚ್ಚುವರಿ ದರವನ್ನು ಪಾವತಿಸುತ್ತಿದ್ದಾರೆ. “ಇದು ಯಾವುದೇ ಆಧಾರವಿಲ್ಲದ ವ್ಯಾಯಾಮವಾಗಿದೆ. ಬಿಎಂಆರ್‌ಸಿಎಲ್ ಮೆಟ್ರೋ ಸವಾರರ ಮೇಲಿನ ಈ ಅನಗತ್ಯ ಹೊರೆಯನ್ನು ನಿಲ್ಲಿಸಬೇಕು ಮತ್ತು ದರಗಳಲ್ಲಿನ ವೈಪರೀತ್ಯಗಳನ್ನು ತಕ್ಷಣ ಸರಿಪಡಿಸಬೇಕು,” ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮೆಟ್ರೋ (ಬಿಎಂಆರ್‌ಸಿಎಲ್) ಕಳೆದ ತಿಂಗಳು ಮೆಟ್ರೋ ಪ್ರಯಾಣದ ಕನಿಷ್ಠ ಮತ್ತು ಗರಿಷ್ಠ ದರಗಳಲ್ಲಿ ಪರಿಷ್ಕರಣೆ ಮಾಡಿದಿತ್ತು. ಹೊಸ ದರಗಳು 5 ರಿಂದ 15 ರೂಪಾಯಿವರೆಗೆ ಹೆಚ್ಚಾಗಿದ್ದು, ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗಿತ್ತು. ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರಿಷ್ಕರಣೆ ಕಾನೂನುಬದ್ಧವಾಗಿದ್ದು, ಎಫ್‌ಎಫ್‌ಸಿ ಶಿಫಾರಸುಗಳ ಆಧಾರದ ಮೇಲಿದೆ ಎಂದು ಹೇಳಿತ್ತು. ಆದರೆ ಈಗ ಸಂಸದ ತೇಜಸ್ವಿ ಸೂರ್ಯ ಅವರ ಪತ್ರದ ನಂತರ ಬಿಎಂಆರ್‌ಸಿಎಲ್‌ದ ಪರಿಷ್ಕರಣೆ ಮತ್ತೆ ವಿವಾದಕ್ಕೀಡಾಗಿದೆ.

Previous articleಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ನಾಹೋರ್ಕೈಗೆ 2025ರ ಸಾಹಿತ್ಯ ನೊಬೆಲ್ ಪ್ರಶಸ್ತಿ
Next articleಉತ್ತರ ಕನ್ನಡ: ಕಬ್ಬು ಬೆಳೆಗಾರರ ಬೆಂಬಲಕ್ಕೆ ಬಂದ ಜಿಲ್ಲಾಡಳಿತ

LEAVE A REPLY

Please enter your comment!
Please enter your name here