ಬೆಂಗಳೂರು: ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ನಾವೀನ್ಯತೆಯನ್ನು ಉತ್ತೇಜಿಸುವ 1,000 ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್) ವನ್ನು ರಾಜ್ಯ ಸರ್ಕಾರ ಅನಾವರಣಗೊಳಿಸಿದೆ. ಇದರಿಂದ 5 ಲಕ್ಷ ಉದ್ಯೋಗ ಸೃಷ್ಟಿಸುವ ಅವಕಾಶವಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೃಢವಾದ ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಲು ವಿನ್ಯಾಸಗೊಳಿಸಲಾದ ಮಹತ್ವದ ಕಾರ್ಯಕ್ರಮ ಇದಾಗಿದೆ. ಐಟಿಬಿಟಿ ಇಲಾಖೆ ಲೀಪ್ ಯೋಜನೆಯನ್ನು ಮೈಸೂರು – ಚಾಮರಾಜನಗರ, ಮಂಗಳೂರು – ಉಡುಪಿ, ಹುಬ್ಬಳ್ಳಿ – ಬೆಳಗಾವಿ – ಧಾರವಾಡ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗ ಮುಂತಾದ ಕ್ಲಸ್ಟರ್‌ಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ನವೋತ್ಪಾದನಾ ಹಬ್‌ಗಳಾಗಿ ಪರಿವರ್ತಿಸಿ ರೂಪಾಂತರಗೊಳಿಸಲಿದೆ ಎಂದರು.
ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ಧ ತಂತ್ರಜ್ಞಾನ ಕೇಂದ್ರವಾಗಿದ್ದು, ಸ್ಟಾರ್ಟ್ಅಪ್ ಬ್ಲಿಂಕ್ ಸೂಚ್ಯಂಕ 2025 ಹಾಗೂ ಸ್ಟಾರ್ಟ್ಅಪ್ ಜೀನೋಮ್ 2025ರಲ್ಲಿ ವಿಶ್ವದಾದ್ಯಂತ ಕ್ರಮವಾಗಿ 10ನೇ ಮತ್ತು 14ನೇ ಸ್ಥಾನ ಪಡೆದಿದೆ. ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉದ್ಯಮಿಗಳನ್ನು ಸಬಲೀಕರಣಗೊಳಿಸಿದರೆ ರಾಜ್ಯದ ನಿಜವಾದ ಸಾಮರ್ಥ್ಯವು ಅನಾವರಣಗೊಳ್ಳುತ್ತದೆ. ಮುಂದಿನ 5 ವರ್ಷಗಳ ಕಾಲಮಿತಿಯಲ್ಲಿ ಅನುಷ್ಠಾನವಾಗಲಿದೆ ಎಂದರು.
1100 ನವೋದ್ಯಮ ಉತ್ತೇಜನ: ರಾಜ್ಯದಲ್ಲಿ ಈಗಾಗಲೇ 1100 ಸ್ಟಾರ್ಟ್ಅಪ್‌ಗಳಿಗೆ ಇಲಾಖೆ ಉತ್ತೇಜನ ಕೊಟ್ಟಿದೆ. ಕರ್ನಾಟಕ ನವೋದ್ಯಮ ಬೌಂಡರಿ ಸ್ಥಾಪಿಸುವ ಮೂಲಕ ವಿವಿಧ ಏಳೆಂಟು ಕ್ಷೇತ್ರಗಳಿಗೆ ತಂತ್ರಜ್ಞಾನ ಆಧಾರಿತ ಅನ್ವೇಷಣೆಗೆ ಆದ್ಯತೆ ಕೊಡಲಾಗುತ್ತದೆ. ಇದರಲ್ಲಿ ಸ್ಥಳೀಯ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳುವ ಮೂಲಕ, ಸಂಶೋಧನೆಗೆ ವಿದೇಶಗಳ ನೆರವು ಪಡೆಯಲು ಅವಕಾಶವಿದೆ ಎಂದರು.


























6zwl3p