ಬೆಂಗಳೂರು: ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಸಂಸ್ಥೆಯು 2024–25ನೇ ಸಾಲಿನ ಲಾಭಾಂಶವಾಗಿ 135 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ್ ಅವರು, ಕೆಎಸ್‌ಡಿಎಲ್ ಸಂಸ್ಥೆ ಕಳೆದ ಹಣಕಾಸು ವರ್ಷದಲ್ಲಿ ₹1,700 ಕೋಟಿ ರೂಪಾಯಿ ವಹಿವಾಟು ನಡೆಸಿ ₹451 ಕೋಟಿ ಲಾಭ ಕಂಡಿದೆ ಎಂದು ಹೇಳಿದರು. “ಈ ಲಾಭದ ಶೇ.30ರಷ್ಟು ಭಾಗವನ್ನು ಸರ್ಕಾರಕ್ಕೆ ಲಾಭಾಂಶವಾಗಿ ನೀಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ – ಮೂರೂ ಕ್ಷೇತ್ರಗಳಲ್ಲಿ ಇದು ಸಾರ್ವಕಾಲಿಕ ದಾಖಲೆ,” ಎಂದು ಅವರು ಹೇಳಿದರು.
ಪಾಟೀಲ್ ಅವರ ಪ್ರಕಾರ, 2022–23ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸ್ಥೆಯು 54 ಕೋಟಿ ರೂ. ಲಾಭಾಂಶ ನೀಡಿತ್ತು, 2023–24ರಲ್ಲಿ ಅದು 108 ಕೋಟಿಗೆ ಏರಿಕೆಯಾಗಿತ್ತು. ಈ ಬಾರಿ 135 ಕೋಟಿಗೆ ತಲುಪಿರುವುದು 27 ಕೋಟಿಯ ಹೆಚ್ಚಳವನ್ನು ಸೂಚಿಸುತ್ತದೆ. ಅವರು ಮುಂದಿನ ವರ್ಷಗಳಲ್ಲಿ ಈ ಮೊತ್ತ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 5/- ಕೋಟಿ ರೂಪಾಯಿಗಳ ಚೆಕ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ. ಸುಧಾಕರ್, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ. ಪ್ರಶಾಂತ್ ಉಪಸ್ಥಿತರಿದ್ದರು.
