Home ನಮ್ಮ ಜಿಲ್ಲೆ ಬೆಂಗಳೂರು ಪತ್ನಿ ಕೊಲೆ: ಕೊನೆಗೂ ಬಾಯಿಬಿಟ್ಟ ಪತಿ, ಬಯಲಾಯ್ತು ಸಾವಿನ ಹಿಂದಿನ ‘ಸೈಲೆಂಟ್’ ಸಂಚು!

ಪತ್ನಿ ಕೊಲೆ: ಕೊನೆಗೂ ಬಾಯಿಬಿಟ್ಟ ಪತಿ, ಬಯಲಾಯ್ತು ಸಾವಿನ ಹಿಂದಿನ ‘ಸೈಲೆಂಟ್’ ಸಂಚು!

0

ಬೆಂಗಳೂರು: ರಾಜ್ಯ ರಾಜಧಾನಿಯನ್ನೇ ಬೆಚ್ಚಿಬೀಳಿಸಿದ್ದ ಹೈ-ಪ್ರೊಫೈಲ್ ವೈದ್ಯೆ ಡಾ. ಕೃತಿಕಾ ರೆಡ್ಡಿ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಲಾಗಿದ್ದ ಈ ಪ್ರಕರಣ, ಇದೀಗ ಒಂದು ವ್ಯವಸ್ಥಿತ ಮತ್ತು ಪೂರ್ವನಿಯೋಜಿತ ಕೊಲೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಪೊಲೀಸರ ಸುದೀರ್ಘ ವಿಚಾರಣೆಯ ಬಳಿಕ, ಆಕೆಯ ಪತಿ ಡಾ. ಮಹೇಂದ್ರ ರೆಡ್ಡಿ ಕೊನೆಗೂ ತಾನೇ ಹಂತಕ ಎಂದು ತಪ್ಪೊಪ್ಪಿಕೊಂಡಿದ್ದು, ಆತ ರೂಪಿಸಿದ್ದ ಕೊಲೆಯ ಯೋಜನೆಯ ವಿವರಗಳು ಬೆಚ್ಚಿಬೀಳಿಸುವಂತಿವೆ.

ಕೊಲೆಗೆ ಕಾರಣ: ಡಾ. ಕೃತಿಕಾ ಅನಾರೋಗ್ಯದ ಸಮಸ್ಯೆಯಿಂದ ಮಹೇಂದ್ರ ಬೇಸತ್ತಿದ್ದ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ಲದ ಕಾರಣ, ಆಕೆಯಿಂದ ದೂರವಾಗಲು ಬಯಸಿದ್ದ. ಆದರೆ, ವಿಚ್ಛೇದನ ಪಡೆದರೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಮತ್ತು ಸಮಾಜದಲ್ಲಿ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ, ಆಕೆಯನ್ನು ಸದ್ದಿಲ್ಲದೆ ಮುಗಿಸಲು ನಿರ್ಧರಿಸಿದ್ದ.

ಪತ್ನಿ ಸಾಯಬೇಕು, ಆದರೆ ತಾನು ಒಳ್ಳೆಯವನಾಗಿಯೇ ಉಳಿಯಬೇಕು ಮತ್ತು ಆಸ್ತಿ ತನಗೇ ದಕ್ಕಬೇಕು ಎಂಬುದು ಆತನ ದುರಾಲೋಚನೆಯಾಗಿತ್ತು.

ವೈದ್ಯಕೀಯ ಜ್ಞಾನವನ್ನೇ ಅಸ್ತ್ರವಾಗಿಸಿಕೊಂಡ ಪತಿ: ತನ್ನ ವೈದ್ಯಕೀಯ ಜ್ಞಾನವನ್ನೇ ದುರ್ಬಳಕೆ ಮಾಡಿಕೊಂಡ ಮಹೇಂದ್ರ, ಕೃತಿಕಾಳ ಸಾವನ್ನು ‘ಸಹಜ ಸಾವು’ ಎಂದು ಬಿಂಬಿಸುವ ವ್ಯವಸ್ಥಿತ ಸಂಚು ರೂಪಿಸಿದ್ದ.

ಆಕೆಯ ಆರೋಗ್ಯ ಸ್ಥಿತಿ ಮೊದಲೇ ಹದಗೆಟ್ಟಿದ್ದರಿಂದ, ಸಾವು ಸಹಜವಾಗಿ ಸಂಭವಿಸಿದೆ ಎಂದು ನಂಬಿಸಿದರೆ, ಮರಣೋತ್ತರ ಪರೀಕ್ಷೆ ನಡೆಯುವುದಿಲ್ಲ, ಆಗ ತನ್ನ ಕೃತ್ಯ ಬಯಲಿಗೆ ಬರುವುದಿಲ್ಲ ಎಂಬುದು ಆತನ ಲೆಕ್ಕಾಚಾರವಾಗಿತ್ತು.

ಇದಕ್ಕಾಗಿ, ಆತ ಅರವಳಿಕೆ ಮದ್ದನ್ನು (Anesthesia) ಅಸ್ತ್ರವಾಗಿ ಬಳಸಿದ್ದ. ಕೃತಿಕಾ ದೇಹದ ತೂಕಕ್ಕೆ ಕೇವಲ 7 ರಿಂದ 8 ml ಅರವಳಿಕೆ ಮದ್ದು ಸಾಕಾಗಿತ್ತು. ಆದರೆ, ಆತ ಉದ್ದೇಶಪೂರ್ವಕವಾಗಿ 15 ml ನಷ್ಟು ಪ್ರೊಪೋಫಾಲ್ (Propofol) ಇಂಜೆಕ್ಷನ್ ನೀಡಿ ಆಕೆಯನ್ನು ಕೊಲೆ ಮಾಡಿದ್ದಾಗಿ ತನಿಖೆಯಿಂದ ದೃಢಪಟ್ಟಿದೆ.

ಮೊಬೈಲ್ ಫೋನ್ ಬಟಾಬಯಲು ಮಾಡಿದ ಸತ್ಯ: ಆರೋಪಿ ತಾನು ಬುದ್ಧಿವಂತ ಎಂದು ಭಾವಿಸಿದ್ದರೂ, ಆತನ ಮೊಬೈಲ್ ಫೋನ್ ಅವನ ಕೃತ್ಯವನ್ನು ಬಟಾಬಯಲು ಮಾಡಿದೆ. ಪೊಲೀಸರು ರಿಟ್ರೀವ್ ಮಾಡಿದ ಡಾಟಾದಲ್ಲಿ, “I have killed Kruthika” ಎಂದು ಆತ ಮತ್ತೊಬ್ಬರಿಗೆ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ.

ಇದಲ್ಲದೆ, ಕೊಲೆಗೆ ಬಳಸಿದ ಪ್ರೊಪೋಫಾಲ್ ಖರೀದಿಸಿದ್ದಕ್ಕೆ ಬಿಲ್, ಕೊಲೆ ಮಾಡುವ ಬಗ್ಗೆ ಮತ್ತೊಬ್ಬರೊಂದಿಗೆ ಚಾಟ್ ಮಾಡಿರುವ ಸಂಭಾಷಣೆ, ಮತ್ತು ಬಳಸಿದ ಇಂಜೆಕ್ಷನ್ ಕ್ಯಾನ್ ಸೇರಿದಂತೆ ಪ್ರಬಲ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿವೆ.

ಈ ಎಲ್ಲಾ ಸಾಕ್ಷ್ಯಗಳ ಮುಂದೆ ತನ್ನ ತಪ್ಪೊಪ್ಪಿಕೊಳ್ಳದೆ ಮಹೇಂದ್ರನಿಗೆ ಬೇರೆ ದಾರಿಯಿರಲಿಲ್ಲ. ಪತ್ನಿಯನ್ನು ಮುಗಿಸಿ, ಆಸ್ತಿ ಉಳಿಸಿಕೊಂಡು, ಸಮಾಜದಲ್ಲಿ ಒಳ್ಳೆಯವನಾಗಿ ಉಳಿಯುವ ಆತನ ಯೋಜನೆ ಸಂಪೂರ್ಣ ವಿಫಲವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version