Home ನಮ್ಮ ಜಿಲ್ಲೆ ಬೆಂಗಳೂರು ಬೃಹತ್ ಬೆಂಗಳೂರಿಗೆ ಆನೇಕಲ್ ಸೇರ್ಪಡೆ: ಡಿಕೆಶಿ ಕೊಟ್ಟ ಗುಡ್ ನ್ಯೂಸ್!

ಬೃಹತ್ ಬೆಂಗಳೂರಿಗೆ ಆನೇಕಲ್ ಸೇರ್ಪಡೆ: ಡಿಕೆಶಿ ಕೊಟ್ಟ ಗುಡ್ ನ್ಯೂಸ್!

0

ಆನೇಕಲ್: ಬೆಂಗಳೂರಿನ ವೇಗದ ಬೆಳವಣಿಗೆಗೆ ಸರಿಸಾಟಿಯಾಗಿ, ಆನೇಕಲ್ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುವ ಮಹತ್ವದ ಘೋಷಣೆಯೊಂದನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡಿದ್ದಾರೆ.

ಭವಿಷ್ಯದಲ್ಲಿ ಆನೇಕಲ್ ಪಟ್ಟಣವನ್ನು ‘ಬೃಹತ್ ಬೆಂಗಳೂರು ಪ್ರಾಧಿಕಾರ’ (GBA) ವ್ಯಾಪ್ತಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದ್ದು, ಈ ಭಾಗದ ಜನರ ದಶಕಗಳ ನಿರೀಕ್ಷೆಗೆ ರೆಕ್ಕೆಪುಕ್ಕ ನೀಡಿದ್ದಾರೆ.

ಆನೇಕಲ್‌ಗೆ ಅಭಿವೃದ್ಧಿಯ ನೀಲನಕ್ಷೆ: ಆನೇಕಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಈಗಾಗಲೇ ನಾವು ಆನೇಕಲ್ ಭಾಗಕ್ಕೆ ಕಾವೇರಿ ನೀರು ಪೂರೈಸುತ್ತಿದ್ದೇವೆ. ಬೃಹತ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ, ಈ ಪ್ರದೇಶಕ್ಕೆ ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಿ, ಸಮಗ್ರ ಯೋಜನೆ ರೂಪಿಸಲಾಗುವುದು,” ಎಂದು ಭರವಸೆ ನೀಡಿದರು.

ಬೆಳೆಯುತ್ತಿರುವ ನಗರದ ಪ್ರಮುಖ ಸಮಸ್ಯೆಯಾದ ಸಂಚಾರ ದಟ್ಟಣೆಯ ಬಗ್ಗೆಯೂ ಅವರು ದೂರದೃಷ್ಟಿಯ ಮಾತುಗಳನ್ನಾಡಿದರು. “ನಗರ ಸಂಪೂರ್ಣವಾಗಿ ಬೆಳೆದ ಮೇಲೆ ಸಂಚಾರ ಯೋಜನೆ ರೂಪಿಸುವುದು ಕಷ್ಟ. ಆದ್ದರಿಂದ, ಆನೇಕಲ್ ಭಾಗದಲ್ಲಿ ಈಗಿನಿಂದಲೇ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯೋಜನೆ ರೂಪಿಸಲು ಸಭೆ ನಡೆಸಿ ಚರ್ಚಿಸಲಾಗುವುದು,” ಎಂದು ಹೇಳಿದರು.

ಬಯೋಕಾನ್ ಸಂಸ್ಥೆಯ ಸುತ್ತಮುತ್ತಲಿನ ರಸ್ತೆಗುಂಡಿ ಮತ್ತು ಕಸದ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿ, ಪಂಚಾಯ್ತಿ ಮತ್ತು ನಗರ ವ್ಯಾಪ್ತಿಯ ಆಡಳಿತಾತ್ಮಕ ವ್ಯತ್ಯಾಸಗಳನ್ನು ಸ್ಪಷ್ಟಪಡಿಸಿ, ಸಮಸ್ಯೆ ಬಗೆಹರಿಸುವ ಇಂಗಿತ ವ್ಯಕ್ತಪಡಿಸಿದರು.

ಜನರ ಜೇಬಿಗೆ 1 ಲಕ್ಷ ಕೋಟಿ: ತಮ್ಮ ಸರ್ಕಾರದ ಜನಪರ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡ ಡಿಕೆಶಿ, “ನಾವು ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕ 20 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ 53 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಇವೆಲ್ಲವನ್ನೂ ಸೇರಿಸಿದರೆ, ನಮ್ಮ ಸರ್ಕಾರ ಪ್ರತಿ ವರ್ಷ ಜನರ ಜೇಬಿಗೆ 1 ಲಕ್ಷ ಕೋಟಿ ರೂಪಾಯಿ ಹಾಕುವ ಮೂಲಕ ಜನರಿಗೆ ಶಕ್ತಿ ತುಂಬುತ್ತಿದೆ,” ಎಂದು ಹೇಳಿದರು.

ಬ್ಯಾಂಕ್ ರಾಷ್ಟ್ರೀಕರಣ, ಆಹಾರ ಭದ್ರತಾ ಕಾಯ್ದೆ, ನರೇಗಾದಂತಹ ಕಾಂಗ್ರೆಸ್‌ನ ಐತಿಹಾಸಿಕ ಯೋಜನೆಗಳನ್ನು ಸ್ಮರಿಸಿದ ಅವರು, “ಬಡವರ ಪರವಾಗಿ ನಿಲ್ಲುವ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಬಿಜೆಪಿ ಇಂತಹ ಒಂದೇ ಒಂದು ಜನಪರ ಯೋಜನೆ ನೀಡಿದೆಯೇ?” ಎಂದು ಪ್ರಶ್ನಿಸಿದರು.

ಒಗ್ಗಟ್ಟಿನ ಮಂತ್ರ, ವಿಪಕ್ಷಗಳಿಗೆ ತರಾಟೆ: ಪಕ್ಷದ ಕಾರ್ಯಕರ್ತರಿಗೆ ಒಗ್ಗಟ್ಟಿನ ಪಾಠ ಹೇಳಿದ ಅವರು, “ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇರಬಾರದು. ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ಎಲ್ಲರೂ ಒಂದಾಗಿ ಕೆಲಸ ಮಾಡಿದರೆ 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ವಿಚಾರದಲ್ಲಿ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, ಆಂಧ್ರಪ್ರದೇಶ ಸರ್ಕಾರದ ಅಸಹಕಾರದಿಂದಾಗಿ ಅಣೆಕಟ್ಟಿನ ಹೂಳು ತೆಗೆಯಲು ಸಾಧ್ಯವಾಗದೆ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ, ಸೋನಿಯಾ ಗಾಂಧಿಯವರ ತ್ಯಾಗ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಕಲ್ಯಾಣ ಕರ್ನಾಟಕಕ್ಕೆ 371ಜೆ ತಂದಿದ್ದನ್ನು ಸ್ಮರಿಸಿ, ಕಾಂಗ್ರೆಸ್ ನಾಯಕತ್ವವನ್ನು ಕೊಂಡಾಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version