Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: ಭೂ ಮಾಲೀಕರಿಗೆ ಡಿಕೆಶಿ ಬಂಪರ್ ಕೊಡುಗೆ, 3 ಪಟ್ಟು ಪರಿಹಾರದ ಘೋಷಣೆ!

ಬೆಂಗಳೂರು: ಭೂ ಮಾಲೀಕರಿಗೆ ಡಿಕೆಶಿ ಬಂಪರ್ ಕೊಡುಗೆ, 3 ಪಟ್ಟು ಪರಿಹಾರದ ಘೋಷಣೆ!

0

ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಆಸ್ತಿ ಮಾಲೀಕರಿಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಬಹುನಿರೀಕ್ಷಿತ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹತ್ವದ ಯೋಜನೆಗೆ ಚಾಲನೆ ನೀಡುವ ನಿಟ್ಟಿನಲ್ಲಿ, ಭೂಮಿ ನೀಡುವ ರೈತರು ಮತ್ತು ಆಸ್ತಿ ಮಾಲೀಕರಿಗೆ ಅಭೂತಪೂರ್ವ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.

ಸರ್ಕಾರದ ದಿಟ್ಟ ಹೆಜ್ಜೆ; ಮೂರು ಪಟ್ಟು ಪರಿಹಾರ: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಗುರಿ ಹೊಂದಿರುವ 117 ಕಿಲೋಮೀಟರ್ ಉದ್ದದ “ಬೆಂಗಳೂರು ಬ್ಯುಸಿನೆಸ್ ಕಾರಿಡಾರ್” (ಹಿಂದಿನ ಪೆರಿಫೆರಲ್ ರಿಂಗ್ ರೋಡ್) ಯೋಜನೆಗೆ ಭೂಮಿ ನೀಡುವವರಿಗೆ ಸರ್ಕಾರದ ಮಾರ್ಗಸೂಚಿ ದರದ ಮೂರು ಪಟ್ಟು ಪರಿಹಾರ ನೀಡುವುದಾಗಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

“ಬಿಡಿಎ ಕಾಯ್ದೆಯ ಪ್ರಕಾರ ದುಪ್ಪಟ್ಟು ಪರಿಹಾರ ನೀಡಲು ಸಹ ಅವಕಾಶವಿಲ್ಲ. ಆದರೂ, ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರವು ಮೂರು ಪಟ್ಟು ಪರಿಹಾರ, ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (TDR) ಅಥವಾ ಹೆಚ್ಚುವರಿ ಮಹಡಿ ವಿಸ್ತೀರ್ಣ ಅನುಪಾತ (FAR) ನೀಡಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ,” ಎಂದು ಅವರು ತಿಳಿಸಿದ್ದಾರೆ.

2007-08ರಲ್ಲಿಯೇ ನಿರ್ಧಾರವಾಗಿದ್ದರೂ, ಹಿಂದಿನ ಸರ್ಕಾರಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಧೈರ್ಯ ತೋರಿರಲಿಲ್ಲ ಎಂದು ಶಿವಕುಮಾರ್ ಉಲ್ಲೇಖಿಸಿದ್ದಾರೆ.

ಯೋಜನೆಯ ಹೊಸ ಸ್ವರೂಪ: ಈ ಹಿಂದೆ 100 ಮೀಟರ್ ಅಗಲಕ್ಕೆ ಯೋಜಿಸಲಾಗಿದ್ದ ಈ ಕಾರಿಡಾರ್ ಅನ್ನು ಇದೀಗ 65 ಮೀಟರ್‌ಗೆ ಮರುವಿನ್ಯಾಸಗೊಳಿಸಲಾಗಿದೆ. ಈ ಬದಲಾವಣೆಯು ಕೇವಲ ರಸ್ತೆ ನಿರ್ಮಾಣಕ್ಕೆ ಸೀಮಿತವಾಗದೆ, ಮೆಟ್ರೋ ರೈಲು ಮಾರ್ಗ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವ ದೂರದೃಷ್ಟಿಯನ್ನು ಹೊಂದಿದೆ. ಇದು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.

ಪರಿಹಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆ: ಸರ್ಕಾರದ ಈ ಘೋಷಣೆಯು ಭೂ ಮಾಲೀಕರಲ್ಲಿ ಸಂತಸ ಮೂಡಿಸಿದೆಯಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸರ್ಕಾರದ ಮಾರ್ಗಸೂಚಿ ದರವು ಮಾರುಕಟ್ಟೆ ದರಕ್ಕಿಂತ ಕಡಿಮೆ ಇರುತ್ತದೆ.

ಉದಾಹರಣೆಗೆ, ಸರ್ಕಾರದ ದರ ಎಕರೆಗೆ 20 ಲಕ್ಷವಿದ್ದರೆ, ಮೂರು ಪಟ್ಟು ಅಂದರೆ 60 ಲಕ್ಷ ಸಿಗುತ್ತದೆ. ಆದರೆ, ಅದೇ ಜಮೀನಿನ ಮಾರುಕಟ್ಟೆ ದರ 80 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿರಬಹುದು. ಈ ವ್ಯತ್ಯಾಸದಿಂದಾಗಿ ನಿಜವಾದ ಲಾಭ ಯಾರಿಗೆ ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version