Home ನಮ್ಮ ಜಿಲ್ಲೆ ಬೆಂಗಳೂರು ದೇಶದ ಮೊದಲ ಕ್ವಾಂಟಂ ಸಿಟಿ: ಬೆಂಗೂರಲ್ಲಿ 6 ಎಕರೆ ಜಾಗ, ಷರತ್ತುಗಳು

ದೇಶದ ಮೊದಲ ಕ್ವಾಂಟಂ ಸಿಟಿ: ಬೆಂಗೂರಲ್ಲಿ 6 ಎಕರೆ ಜಾಗ, ಷರತ್ತುಗಳು

0

ದೇಶದ ಮೊದಲ ಕ್ವಾಂಟಂ ಸಿಟಿ ಯೋಜನೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಅತ್ಯಾಧುನಿಕ ಪ್ರಯೋಗಾಲಯಗಳು, ಸ್ಟಾರ್ಟ್ಆಪ್‌ಗಳಿಗೆ ಇನ್ಕೊಬೇಷನ್ ಸೌಲಭ್ಯಗಳು ಹಾಗೂ ಕೈಗಾರಿಕಾ-ಶೈಕ್ಷಣಿಕ ಸಹಭಾಗಿತ್ವಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಹೊಂದಿರುವ ಕ್ವಾಂಟಮ್ ಸಿಟಿ (ಕ್ಯೂ-ಸಿಟಿ) ಸ್ಥಾಪನೆಗೆ ರಾಜ್ಯ ಸರ್ಕಾರ ಹೆಸರುಘಟ್ಟದಲ್ಲಿ 6.17 ಎಕರೆ ಜಾಗವನ್ನು ಮಂಜೂರು ಮಾಡಿದೆ.

ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ. ಈ ಕುರಿತು ಭಾನುವಾರ ಮಾಧ್ಯಮ ಪ್ರಕಟಣೆಯನ್ನು ನೀಡಿದ್ದಾರೆ. ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ ಇದಕ್ಕೆ ಪೂರಕವಾಗಿ ಕ್ಯೊ-ಸಿಟಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ದೇಶದ ಮೊದಲ ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಕ್ವಾಂಟಮ್ ಸಿಟಿಗೆ ಜಾಗವನ್ನು ಮಂಜೂರು ಮಾಡಲಾಗಿದ್ದು ಅಂತಾರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ ವಿಸ್ತರಣೆ ಯೋಜನೆ 8 ಏಕರೆ ಭೂಮಿಯನ್ನೂ ನೀಡಲಾಗಿದೆ ಎಂದಿರುವ ಅವರು, ಎರಡೂ ಅಭಿವೃದ್ಧಿಗಳು ಸೇರಿ ಕರ್ನಾಟಕವನ್ನು ಉನ್ನತ ವಿಜ್ಞಾನ ಮತ್ತು ನವೀನತೆಯ ಕೇಂದ್ರವಾಗಿ ಎತ್ತಿ ಹಿಡಿಯಲಿದೆ ಎಂದಿದ್ದಾರೆ.

ಹೆಸರಘಟ್ಟದಲ್ಲಿ ನಿರ್ಮಾಣಗೊಳ್ಳಲಿರುವ ಕ್ವಾಂಟಮ್ ಸಿಟಿ ಜಾಗತಿಕ ಪ್ರತಿಭೆ, ಹೂಡಿಕೆಗಳನ್ನು ಆಕರ್ಷಿಸಲಿದೆ ಮತ್ತು ಬೆಂಗಳೂರನ್ನು ಭಾರತದ ಹಾಗೂ ವಿಶ್ವದ ಕ್ವಾಂಟಮ್ ಭೂಪಟದ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದು ಸಚಿವ ಭೋಸರಾಜು ತಿಳಿಸಿದ್ದಾರೆ.

ವಿಶ್ವದರ್ಜೆಯ ಸೌಲಭ್ಯ ಒದಗಿಸುತ್ತೇವೆ: ಈ ಕುರಿತು ಮಾತನಾಡಿರುವ ಸಚಿವ ಎನ್.ಎಸ್.ಭೋಸರಾಜು, “ಕ್ಯೂ-ಸಿಟಿಯಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ಇದು ಶೈಕ್ಷಣಿಕ ಸಂಸ್ಥೆಗಳು, ಕ್ವಾಂಟಮ್ ಹಾರ್ಡ್‌ವೇರ್‌ಗಳಿಗಾಗಿ ಉತ್ಪಾದನಾ ಕ್ಲಸ್ಟರ್‌ಗಳು ಪ್ರೊಸೆಸರ್‌ಗಳು, ಸಹಾಯಕಗಳು ಹಾಗೂ ಕ್ವಾಂಟಮ್ ಎಚ್.ಪಿ.ಸಿ. ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‌ಗಳನ್ನು ಸಂಯೋಜಿಸಲಿದೆ” ಎಂದು ಹೇಳಿದ್ದಾರೆ.

ಷರತ್ತುಗಳು

  1. ಮಂಜೂರಾದ ಜಮೀನನ್ನು ಮಂಜೂರು ಮಾಡಲಾಗಿರುವ ಉದ್ದೇಶಕ್ಕಾಗಿಯೇ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು
  2. ಮಂಜೂರಾದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ
  3. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು
  4. ಮಂಜೂರು ಮಾಡಿರುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ
  5. ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ. ಇತರೆ ಯಾವುದೇ ರೀತಿಯ ಪರಭಾರೆ ಮಾಡತಕ್ಕದ್ದಲ್ಲ
  6. ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಾಗಿದ್ದಲ್ಲಿ ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೇ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ
  7. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು
  8. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು
  9. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು
  10. ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಸದರಿ ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version