ಬೆಂಗಳೂರು: “ಬ್ರ್ಯಾಂಡ್ ಬೆಂಗಳೂರು” ಎಂಬ ಹೊಳಪಿನ ಮಾತುಗಳ ನಡುವೆ, ನಗರದ ರಸ್ತೆಗಳು ಮೃತ್ಯುಕೂಪಗಳಾಗಿ ಪರಿಣಮಿಸುತ್ತಿವೆ ಎಂಬುದಕ್ಕೆ ಮತ್ತೊಂದು ದುರಂತ ಸಾಕ್ಷಿಯಾಗಿದೆ.
ಇತ್ತೀಚೆಗೆ ಆವಲಹಳ್ಳಿಯಲ್ಲಿ ರಸ್ತೆ ಗುಂಡಿಗೆ ವಿದ್ಯಾರ್ಥಿನಿಯೊಬ್ಬರು ಬಲಿಯಾದ ಘಟನೆ ಮರೆಯುವ ಮುನ್ನವೇ, ಮಾದನಾಯಕನಹಳ್ಳಿ ಬಳಿ ಅಂತಹದ್ದೇ ಭೀಕರ ಘಟನೆಯಲ್ಲಿ 26 ವರ್ಷದ ಯುವತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿ ತಪ್ಪಿಸಲು ಹೋದಾಗ ಲಾರಿಯ ಚಕ್ರಕ್ಕೆ ಸಿಲುಕಿ, ಅಣ್ಣನ ಕಣ್ಣೆದುರೇ ತಂಗಿ ಪ್ರಾಣಬಿಟ್ಟ ದೃಶ್ಯ ಹೃದಯವಿದ್ರಾವಕವಾಗಿತ್ತು.
ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಪ್ರಿಯಾಂಕಾ, ದಾಸನಪುರದ ಆಲೂರು ಸಮೀಪದ ಹುಸ್ಕೂರು ಮುಖ್ಯರಸ್ತೆ ನಿವಾಸಿಯಾಗಿದ್ದರು. ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ, ಆಕೆಯ ಸಹೋದರ ತನ್ನ ಬೈಕ್‌ನಲ್ಲಿ ಪ್ರಿಯಾಂಕಾರನ್ನು ಮಾದಾವರ ಮೆಟ್ರೋ ನಿಲ್ದಾಣಕ್ಕೆ ಬಿಡಲು ತೆರಳುತ್ತಿದ್ದರು. ಮಾದನಾಯಕನಹಳ್ಳಿಯ ಹುಸ್ಕೂರು ಎಪಿಎಂಸಿ ರಸ್ತೆಯಲ್ಲಿ ಸಾಗುತ್ತಿದ್ದಾಗ, ಎದುರಿಗೆ ದೊಡ್ಡ ಗುಂಡಿಯೊಂದು ಕಾಣಿಸಿದೆ.
ಆ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಸಹೋದರ ಬೈಕ್ ಅನ್ನು ಹಠಾತ್ತನೆ ತಿರುಗಿಸಿದ್ದಾರೆ. ಇದರಿಂದ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಎಪಿಎಂಸಿ ಮಾರುಕಟ್ಟೆ ಕಡೆಯಿಂದ ಬರುತ್ತಿದ್ದ ಲಾರಿಯ ಚಕ್ರ, ಪ್ರಿಯಾಂಕಾ ಅವರ ತಲೆಯ ಮೇಲೆ ಹರಿದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಸಹೋದರನಿಗೂ ಗಂಭೀರ ಗಾಯಗಳಾಗಿವೆ.
ಈ ದುರ್ಘಟನೆ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ಕೂಲಿಂಗ್ ಗ್ಲಾಸ್ ಹಾಕಿಕೊಂಡು ಪಾರ್ಕ್‌ಗಳಲ್ಲಿ ಫೋಟೋಶೂಟ್ ಮಾಡಿದರೆ ರಸ್ತೆಗುಂಡಿ ಮುಚ್ಚುವುದಿಲ್ಲ. ನಿಮ್ಮ ಬ್ರ್ಯಾಂಡ್ ಬೆಂಗಳೂರು ಅಭಿಯಾನಕ್ಕೆ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು?” ಎಂದು ಸರ್ಕಾರದ ವಿರುದ್ಧ ಆಕ್ರೋಶದ ಕಟ್ಟೆಯೊಡೆದಿದೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಆದರೆ, ಈ ಘಟನೆ ಬೆಂಗಳೂರಿನ ನಾಗರಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
