ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಆರ್ ಪುರಂನ ತ್ರಿವೇಣಿ ನಗರದಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿ, ಬೃಹತ್ ಮನೆ ಸಮಾನವಾದ ಕಟ್ಟಡವೇ ಕ್ಷಣಾರ್ಧದಲ್ಲಿ ನೆಲಸಮಗೊಂಡಿರುವ ದಾರುಣ ಘಟನೆ ನಡೆದಿದೆ. ಈ ಅವಘಡದಲ್ಲಿ ಓರ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗ್ಗೆ ಸುಮಾರು 7 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಸ್ಫೋಟದ ಶಬ್ದದಿಂದ ಸುತ್ತಮುತ್ತಲಿನ ಪ್ರದೇಶವೇ ನಡುಗಿ ಹೋಗಿದೆ. ಅಕ್ಕಪಕ್ಕದ ಮನೆಗಳ ಕಿಟಕಿಗಳು, ಬಾಗಿಲುಗಳು ಹಾನಿಗೊಳಗಾಗಿವೆ. ಸ್ಫೋಟದ ತೀವ್ರತೆಗೆ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದ್ದು, ಅದರ ಅವಶೇಷಗಳಡಿ ಕೆಲವರು ಸಿಲುಕಿರುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ತಕ್ಷಣವೇ ಕೆ.ಆರ್ ಪುರಂ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಮತ್ತು ಬಾಂಬ್ ಸ್ಕ್ವಾಡ್ ಅಧಿಕಾರಿಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಡಾಗ್ ಸ್ಕ್ವಾಡ್ ಸಹ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಸಿಲಿಂಡರ್ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
