Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: ಸಹಾಯದ ಮುಖವಾಡ; ವಿಧವೆಯ ಬಾಳಲ್ಲಿ ಚೆಲ್ಲಾಟವಾಡಿದ ಪಾಪಿಗಳು

ಬೆಂಗಳೂರು: ಸಹಾಯದ ಮುಖವಾಡ; ವಿಧವೆಯ ಬಾಳಲ್ಲಿ ಚೆಲ್ಲಾಟವಾಡಿದ ಪಾಪಿಗಳು

0

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಮ್ಮೆ ನಂಬಿಕೆ ದ್ರೋಹದ ಕರಾಳ ಮುಖ ಅನಾವರಣಗೊಂಡಿದೆ. ಸಹಾಯ ಮಾಡುವ ನೆಪದಲ್ಲಿ ಒಂಟಿ ಮಹಿಳೆಯೊಬ್ಬರ ಜೀವನವನ್ನು ನರಕವಾಗಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಪತಿಯನ್ನು ಕಳೆದುಕೊಂಡು ನಾಲ್ಕು ವರ್ಷದ ಮಗುವಿನೊಂದಿಗೆ ಬದುಕು ಕಟ್ಟಿಕೊಳ್ಳುತ್ತಿದ್ದ ವಿಧವೆಯೊಬ್ಬರಿಗೆ ಸ್ನೇಹದ ಹೆಸರಲ್ಲಿ ಹತ್ತಿರವಾಗಿ, ಲೈಂಗಿಕ ದೌರ್ಜನ್ಯ ಎಸಗಿ, ಖಾಸಗಿ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿದ ಮೂವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಬಿಸಿ ಮೋಸ ಮಾಡಿದ ಚಂದ್ರಶೇಖರ್: 2021ರಲ್ಲಿ ಪತಿಯನ್ನು ಕಳೆದುಕೊಂಡ ಸಂತ್ರಸ್ತೆ, ಅವರು ನೋಡಿಕೊಳ್ಳುತ್ತಿದ್ದ ಗಾರ್ಮೆಂಟ್ಸ್ ಉದ್ಯಮವನ್ನು ಮುನ್ನಡೆಸುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದರು. 2025ರ ಫೆಬ್ರವರಿಯಲ್ಲಿ ಚಂದ್ರಶೇಖರ್ ಎಂಬ ವ್ಯಕ್ತಿ ಇವರ ಜೀವನ ಪ್ರವೇಶಿಸಿದ್ದ.

“ನಾನು ನಿಮಗೆ ಸಹಾಯ ಮಾಡುತ್ತೇನೆ” ಎಂದು ಹೇಳಿಕೊಂಡು ಪ್ರತಿದಿನ ಅವರನ್ನು ಹಿಂಬಾಲಿಸತೊಡಗಿದ. ಆರಂಭದಲ್ಲಿ ಆತನ ಸಹಾಯವನ್ನು ನಿರಾಕರಿಸಿದರೂ, ಆತ ತನ್ನ ಪ್ರಯತ್ನವನ್ನು ಬಿಡಲಿಲ್ಲ. ನಿರಂತರವಾಗಿ ಮಾತಿಗೆಳೆಯುತ್ತಾ, ನಯವಾದ ಮಾತುಗಳಿಂದ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ.

ಸ್ನೇಹ ಗಾಢವಾಗುತ್ತಿದ್ದಂತೆ, ಚಂದ್ರಶೇಖರ್ ಮದುವೆಯ ಪ್ರಸ್ತಾಪ ಮುಂದಿಟ್ಟ. ತನಗೆ ಈಗಾಗಲೇ ಮಗು ಇರುವ ವಿಚಾರವನ್ನು ಮಹಿಳೆ ತಿಳಿಸಿದರೂ, “ಮಗುವನ್ನು ನಾನು ನೋಡಿಕೊಳ್ಳುತ್ತೇನೆ, ಒಟ್ಟಿಗೆ ಕೆಲಸ ಮಾಡಿಕೊಂಡು ಜೀವನ ನಡೆಸೋಣ,” ಎಂದು ಭಾವುಕವಾಗಿ ಮಾತನಾಡಿ ನಂಬಿಸಿದ್ದಾನೆ. ಈ ಮಾತುಗಳನ್ನು ನಂಬಿದ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ, ಅವರನ್ನು ಬಲವಂತವಾಗಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಗರ್ಭಪಾತ ಬೆದರಿಕೆಯ: ಈ ನಡುವೆ, ಸಂತ್ರಸ್ತೆ ಗರ್ಭವತಿಯಾಗಿದ್ದಾರೆ. ಈ ವಿಷಯ ತಿಳಿದ ಚಂದ್ರಶೇಖರ್, “ಈಗಲೇ ಮಗು ಬೇಡ,” ಎಂದು ಹೇಳಿ, ಗರ್ಭಪಾತಕ್ಕಾಗಿ ಮಾತ್ರೆಯೊಂದನ್ನು ತಂದುಕೊಟ್ಟಿದ್ದಾನೆ. ಆ ಮಾತ್ರೆ ಸೇವಿಸಿದ ಮರುದಿನವೇ ಮಹಿಳೆಗೆ ತೀವ್ರ ರಕ್ತಸ್ರಾವ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ.

ಈ ಸಂಕಟದ ನಡುವೆಯೇ, ಕವಿತಾ ಎಂಬ ಮಹಿಳೆ ತಾನು ಚಂದ್ರಶೇಖರ್‌ನ ಪತ್ನಿ ಎಂದು ಹೇಳಿಕೊಂಡು ಕರೆ ಮಾಡಿ, ಸಂತ್ರಸ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.ಈ ಘಟನೆಯ ನಂತರ, ಚಂದ್ರಶೇಖರ್, ಕವಿತಾ ಮತ್ತು ಸಾಕಮ್ಮ ಎಂಬ ಇನ್ನೋರ್ವ ಮಹಿಳೆ, ಮೂವರೂ ಸೇರಿ ಸಂತ್ರಸ್ತೆಯ ಗಾರ್ಮೆಂಟ್ಸ್‌ಗೆ ಬಂದು ಜಗಳವಾಡಿದ್ದಾರೆ.

ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಚಂದ್ರಶೇಖರ್, ಸಂತ್ರಸ್ತೆಯ ಖಾಸಗಿ ಫೋಟೋಗಳು ತನ್ನ ಬಳಿ ಇರುವುದಾಗಿ ಹೇಳಿ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಮತ್ತು ಗಾರ್ಮೆಂಟ್ಸ್ ಗೋಡೆಗಳ ಮೇಲೆ ಅಂಟಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಜೊತೆಗೆ, ಜಾತಿ ನಿಂದನೆಯನ್ನೂ ಮಾಡಿ ಮಾನಸಿಕವಾಗಿ ಹಿಂಸಿಸಿದ್ದಾನೆ.

ಈ ಎಲ್ಲ ದೌರ್ಜನ್ಯ ಮತ್ತು ಬೆದರಿಕೆಗಳಿಂದ ಬೇಸತ್ತ ಸಂತ್ರಸ್ತೆ, ಕೊನೆಗೆ ಧೈರ್ಯ ಮಾಡಿ ಚಂದ್ರಶೇಖರ್, ಕವಿತಾ ಮತ್ತು ಸಾಕಮ್ಮ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version