Home ನಮ್ಮ ಜಿಲ್ಲೆ ಬೆಂಗಳೂರು 7 ಕೋಟಿ ದರೋಡೆಯ ರೋಚಕ ಕಥೆ: ಸಾಲ ತೀರಿಸಲು ಹೋಗಿ ಜೈಲು ಸೇರಿದ ಖದೀಮರು!

7 ಕೋಟಿ ದರೋಡೆಯ ರೋಚಕ ಕಥೆ: ಸಾಲ ತೀರಿಸಲು ಹೋಗಿ ಜೈಲು ಸೇರಿದ ಖದೀಮರು!

0

ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದ್ದ 7.11 ಕೋಟಿ ರೂಪಾಯಿಗಳ ಎಟಿಎಂ ವಾಹನ ದರೋಡೆ ಪ್ರಕರಣದ ಹಿಂದಿನ ಅಸಲಿ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಸಿನಿಮಾ ಮಾದರಿಯಲ್ಲಿ ನಡೆದ ಈ ಕೃತ್ಯದ ಹಿಂದೆ ಇದ್ದದ್ದು ಕೇವಲ ಸಾಲದ ಬಾಧೆ ಮತ್ತು ಐಷಾರಾಮಿ ಜೀವನದ ಆಸೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ!: ಸಾಮಾನ್ಯವಾಗಿ ಹಣದ ಭದ್ರತೆ ನೋಡಿಕೊಳ್ಳಬೇಕಾದವರೇ ಕಳ್ಳರಾದರೆ ಏನಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಎಟಿಎಂಗಳಿಗೆ ಹಣ ತುಂಬುವ ಏಜೆನ್ಸಿಯಲ್ಲಿ ಹಾಲಿ ಸಿಬ್ಬಂದಿಯಾಗಿದ್ದ ಗೋಪಿ ಎಂಬಾತನೇ ಈ ದರೋಡೆಯ ಮಾಸ್ಟರ್ ಮೈಂಡ್.

ಗೋಪಿ ಮತ್ತು ಆತನ ಸ್ನೇಹಿತ ಕ್ಸೇವಿಯರ್ (ಮಾಜಿ ಉದ್ಯೋಗಿ) ಇಬ್ಬರೂ ಕೇವಲ 17 ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದರು. ಆದರೆ, ಇಸ್ಪೀಟು, ಜೂಜು ಮತ್ತು ಮೋಜಿನ ಜೀವನಕ್ಕೆ ಬಲಿಯಾಗಿದ್ದ ಇವರು ಕುತ್ತಿಗೆಯವರೆಗೆ ಸಾಲ ಮಾಡಿಕೊಂಡಿದ್ದರು. ಈ ಸಾಲವನ್ನು ತೀರಿಸಿ, ಉಳಿದ ಹಣದಲ್ಲಿ ರಾಜನಂತೆ ಬದುಕುವ ಕನಸು ಕಂಡು, ಎಟಿಎಂ ವಾಹನವನ್ನೇ ದೋಚುವ ಸ್ಕೆಚ್ ಹಾಕಿದ್ದರು.

ಕಾನ್ಸ್‌ಟೇಬಲ್ ಸಾಥ್ ಮತ್ತು ಶರಣಾಗತಿ: ಶಾಕಿಂಗ್ ವಿಚಾರವೆಂದರೆ, ಈ ದರೋಡೆಗೆ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ಅಣ್ಣಪ್ಪ ನಾಯ್ಕ್ ಕೂಡ ಸಾಥ್ ನೀಡಿದ್ದ. ಹಣ ಸಾಗಿಸುವ ಮಾರ್ಗ, ಸಮಯ ಎಲ್ಲವನ್ನೂ ಮೊದಲೇ ಪ್ಲ್ಯಾನ್ ಮಾಡಿ ಕೃತ್ಯ ಎಸಗಲಾಗಿತ್ತು.

ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಹೈದರಾಬಾದ್ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗೆ 7ನೇ ಆರೋಪಿ ರಾಕೇಶ್, ತಡರಾತ್ರಿ ಸಿದ್ದಾಪುರ ಠಾಣೆಗೆ ಬಂದು ತಾನಾಗಿಯೇ ಶರಣಾಗಿದ್ದಾನೆ. ಈತ ಆರೋಪಿ ರವಿಯ ಸಹೋದರನಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ.

6.29 ಕೋಟಿ ಹಣ ವಾಪಸ್!: ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ದರೋಡೆಯಾಗಿದ್ದ 7.11 ಕೋಟಿ ರೂಪಾಯಿಗಳ ಪೈಕಿ, ಬರೋಬ್ಬರಿ 6.29 ಕೋಟಿ ಹಣವನ್ನು ರಿಕವರಿ ಮಾಡಲಾಗಿದೆ. ಆರೋಪಿಗಳು ಬಳಸಿದ್ದ ವಾಹನಗಳನ್ನು ಸೀಜ್ ಮಾಡಲಾಗಿದ್ದು, ಉಳಿದ ಹಣಕ್ಕಾಗಿ ಹುಡುಕಾಟ ನಡೆದಿದೆ.

ಗೃಹ ಸಚಿವರ ಮೆಚ್ಚುಗೆ: ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಕರಣವನ್ನು ಭೇದಿಸಿದ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಫಿದಾ ಆಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ತನಿಖೆಯ ವಿವರ ಪಡೆದ ಅವರು, ಇಲಾಖೆಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಭದ್ರತಾ ಏಜೆನ್ಸಿಗಳು ಸಿಬ್ಬಂದಿ ನೇಮಕಾತಿ ಮತ್ತು ಹಣ ಸಾಗಾಟದ ವೇಳೆ ಇನ್ನುಮುಂದೆ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಅಡ್ಡದಾರಿಯಲ್ಲಿ ಶ್ರೀಮಂತರಾಗಲು ಹೋದವರು ಈಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version