Parappana Agrahara: ಕೇಂದ್ರ ಕಾರಾಗೃಹದಲ್ಲಿ ಅಕ್ಷರಶಃ ನಿಯಮಗಳ ಉಲ್ಲಂಘನೆಯಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೈದಿಗಳಿಗೆ ರಾಜಾತಿಥ್ಯ, ಮೋಜು-ಮಸ್ತಿ ನಡೆಯುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ರೌಡಿಶೀಟರ್ ಕುದುರೆ ಮಂಜನ ವಿಚಾರಣೆಯು ಈ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
ಕುಣಿದು ಕುಪ್ಪಳಿಸಿದ್ದನ್ನು ಒಪ್ಪಿಕೊಂಡ ಮಂಜ!: ಜೈಲಿನ ಬ್ಯಾರಕ್‌ಗಳಲ್ಲಿ ಮೊಬೈಲ್ ಬಳಕೆ ಮತ್ತು ಡಿಜೆ ಡ್ಯಾನ್ಸ್ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಕುದುರೆ ಮಂಜ ಜೈಲಿನಿಂದ ಬಿಡುಗಡೆಯಾಗಿದ್ದ.
ಆತನನ್ನು ಠಾಣೆಗೆ ಕರೆಸಿ ಪೊಲೀಸರು ಗ್ರಿಲ್ ಮಾಡಿದಾಗ, ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಆ ವಿಡಿಯೋವನ್ನು ತಾನು ಯಾರೆಲ್ಲರಿಗೂ ಕಳುಹಿಸಿದ್ದೆ ಎಂಬ ರಹಸ್ಯವನ್ನೂ ಬಿಚ್ಚಿಟ್ಟಿದ್ದಾನೆ.
ವಿಜಯಲಕ್ಷ್ಮೀ ದರ್ಶನ್ಗೆ ಸಿಕ್ಕಿತು ಬಿಗ್ ರಿಲೀಫ್: ಈ ಪ್ರಕರಣದಲ್ಲಿ ಆರಂಭದಲ್ಲಿ ನಟ ದರ್ಶನ್ ಆಪ್ತ ಧನ್ವೀರ್ ಹೆಸರು ಕೇಳಿಬಂದಿತ್ತು. ವಿಚಾರಣೆ ವೇಳೆ ಧನ್ವೀರ್, ತಾನು ವಿಡಿಯೋವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಕಳುಹಿಸಿದ್ದೆ ಎಂಬರ್ಥದ ಮಾತುಗಳು ಕೇಳಿಬಂದಿದ್ದವು.
ಇದರಿಂದ ವಿಜಯಲಕ್ಷ್ಮೀ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಭೀತಿ ಇತ್ತು. ಆದರೆ, ಕುದುರೆ ಮಂಜನ ಹೇಳಿಕೆ ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದೆ. ತಾನು ವಿಡಿಯೋವನ್ನು ಕೇವಲ ರೌಡಿಗಳಾದ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗನಿಗೆ ಮಾತ್ರ ಶೇರ್ ಮಾಡಿದ್ದೆ ಎಂದು ಮಂಜ ಸ್ಪಷ್ಟಪಡಿಸಿದ್ದಾನೆ. ಇದರಿಂದಾಗಿ ವಿಜಯಲಕ್ಷ್ಮೀ ದರ್ಶನ್ ನಿಟ್ಟುಸಿರು ಬಿಡುವಂತಾಗಿದೆ.
ಹಿಂಡಲಗಾ ಜೈಲಿಗೆ ಶಿಫ್ಟ್ ಆಗಲಿದೆ ತನಿಖೆ: ಮಂಜ ನೀಡಿದ ಮಾಹಿತಿಯ ಪ್ರಕಾರ, ವಿಡಿಯೋ ಸ್ವೀಕರಿಸಿದ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ನಟ ದರ್ಶನ್ ಜೊತೆ ಟೀ ಪಾರ್ಟಿ ಮಾಡುತ್ತಿದ್ದ ಫೋಟೋ ವೈರಲ್ ಆದ ನಂತರ ಇವರನ್ನು ಅಲ್ಲಿಗೆ ಎತ್ತಂಗಡಿ ಮಾಡಲಾಗಿತ್ತು. ಈಗ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು, ಬೆಳಗಾವಿ ಜೈಲಿಗೆ ತೆರಳಿ ಅಥವಾ ಆರೋಪಿಗಳನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ದರ್ಶನ್ ಪ್ರಕರಣದ ಎಫೆಕ್ಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ರೌಡಿ ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆದ ಬಳಿಕವಷ್ಟೇ ಜೈಲಿನ ಅಕ್ರಮಗಳು ಜಗಜ್ಜಾಹೀರಾಗಿದ್ದವು.
ಜೈಲಾಧಿಕಾರಿಗಳ ಅಮಾನತು ಮತ್ತು ಕೈದಿಗಳ ಸ್ಥಳಾಂತರದಂತಹ ಕಠಿಣ ಕ್ರಮಗಳ ಹೊರತಾಗಿಯೂ, ಹಳೆಯ ವಿಡಿಯೋಗಳು ಒಂದೊಂದಾಗಿ ಹೊರಬರುತ್ತಿರುವುದು ಜೈಲಿನ ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕುದುರೆ ಮಂಜನ ಹೇಳಿಕೆಯಿಂದಾಗಿ ಇನ್ನಷ್ಟು ರೌಡಿಗಳಿಗೆ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವುದು ಖಚಿತವಾಗಿದೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ‘ಕರಾಳ ಸತ್ಯ’ಗಳು ಹೊರಬರುವ ಸಾಧ್ಯತೆಯಿದೆ.
