ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್‌ನಿಂದಾಗಿ ನಟಿ, ಬಿಗ್‌ಬಾಸ್ ಖ್ಯಾತಿಯ ಕಾರುಣ್ಯ ರಾಮ್ ಹಾಗೂ ಆಕೆಯ ಸಹೋದರಿ ಸಮೃದ್ಧಿ ರಾಮ್ ಮಧ್ಯದ ಜಗಳ ಬೀದಿಗೆ ಬಂದಿದ್ದು ಇದೀಗ ಅವರ ಕುಟುಂಬ ಛಿದ್ರವಾಗಿದೆ.
ಅಕ್ಕ-ತಂಗಿ ಇಬ್ಬರೂ ಅನ್ಯೋನ್ಯವಾಗಿದ್ದರು. ಕಳೆದ ಎರಡು ವರ್ಷಗಳಿಂದ ತಂಗಿ ಸಮೃದ್ಧಿ ರಾಮ್ ದೂರವಾಗಿದ್ದರು. ಯಾಕೆ ದೂರವಾಗಿದ್ದಾರೆ ಎಂಬ ಕಾರಣ ಮಾತ್ರ ನಿಗೂಢವಾಗಿತ್ತು. ಈಗ ತಂಗಿ ಸಮೃದ್ಧಿ ರಾಮ್ ಅವರು ನಮಗೆ 25 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಅಕ್ಕ ಕಾರುಣ್ಯ ರಾಮ್ ಆರ್.ಆರ್. ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಸಮೃದ್ಧಿ ಆಪ್ತರಾದ ಪ್ರತಿಭ, ಕಪಿಲ್, ಪ್ರಜ್ವಲ್, ರಕ್ಷಿತ್, ಸಾಗರ್ ಎಂಬವರ ಮೇಲೆಯೂ ದೂರು ನೀಡಿದ್ದಾರೆ.
ಬೆಟ್ಟಿಂಗ್ ಆಪ್‌ನಿಂದ ಬೀದಿಗೆ: ಕಾರುಣ್ಯ ಸಹೋದರಿ ಸಮೃದ್ಧಿ ರಾಮ್ ಬೆಟ್ಟಿಂಗ್ ಹಾವಳಿಯಿಂದ ಹಣ ಕಳೆದುಕೊಂಡ ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಂಡ ಕಾರುಣ್ಯ, ಬೆಟ್ಟಿಂಗ್ ಆಪ್‌ನಿಂದ ಬೀದಿಗೆ ಬಿದ್ದ ಫ್ಯಾಮಿಲಿಯಲ್ಲಿ ನಮ್ಮದೂ ಒಂದು ಅಂತ ಹೇಳಿಕೊಳ್ಳೋಕೆ ಕಷ್ಟ ಆಗುತ್ತದೆ. ಬೆಟ್ಟಿಂಗ್ ಜಾಲದಲ್ಲಿ ಹಣ ಕಳೆದುಕೊಂಡ ಸಮೃದ್ಧಿ ಸಿಕ್ಕಾಪಟ್ಟೆ ಸಾಲ ಮಾಡಿದ್ದಾರೆ. ಅವರು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳ ಸುರಕ್ಷತೆಗೆ AI ಕ್ಯಾಮೆರಾ ಅಳವಡಿಸಲು ಆರ್‌ಸಿಬಿ ಪ್ರಸ್ತಾಪ
ಕಾರುಣ್ಯ ರಾಮ್ ಹೇಳಿದ್ದೇನು?: ಸಂಕ್ರಾಂತಿ ಹಬ್ಬದ ದಿನ ಈ ಥರ ವಿಡಿಯೋ ಮಾಡೋ ಪರಿಸ್ಥಿತಿ ಬರುತ್ತೆ ಅಂತ ಅನ್ಕೊಂಡಿರಲಿಲ್ಲ. ನನ್ನ ಮೂರು ವರ್ಷದ ದುಃಖವನ್ನು ಯಾರ ಹತ್ತಿರವೂ ಹೇಳದೇ ನನ್ನೊಳಗೆ ಇಟ್ಟುಕೊಂಡು ತೊಳಲಾಡುತ್ತಿದ್ದೆ. ಬೆಟ್ಟಿಂಗ್ ಆ್ಯಪ್‌ನಿಂದ ಎಷ್ಟೋ ಫ್ಯಾಮಿಲಿ ಒದ್ದಾಡಿವೆ. ನನ್ನ ಫ್ಯಾಮಿಲಿನೂ ಒಂದು ಅಂತ ಹೇಳೋಕೆ ಕಷ್ಟ ಆಗುತ್ತಿದೆ.
ನನ್ನ ತಂಗಿ ನಮ್ಮಿಂದ ಬೇರೆಯಾಗಿ 3 ವರ್ಷ ಆಗಿದೆ. ಯಾರದ್ದೋ ಸಂಪರ್ಕದಿಂದ ಅವಳು ಒದ್ದಾಡಿ ಅವಳೂ ಹೊರ ಬರೋಕೆ ಆಗದೆ, ಮನೆಯಿಂದಲೂ ಹೊರಗೆ ಹೋಗಿರುತ್ತಾಳೆ. ಸಹವಾಸ ದೋಷದಿಂದ ಹೀಗಾಗಿದೆ ಅಂತ ಹೇಳ್ತೀನಿ. ಸ್ನೇಹಿತರಿಂದ ಹೀಗಾಗಿದೆ ಅಂತ ತಿಳಿದ ಬಳಿಕ ಆಕೆಯನ್ನು ನಾವು ಕೇಳಿದಾಗ ಎಲ್ಲವೂ ಗೊತ್ತಾಯಿತು. ಬೆಟ್ಟಿಂಗ್ ಆ್ಯಪ್ ಮಾರಿಗೆ ನಮ್ಮ ಕುಟುಂಬ ಬಲಿಯಾಗಿದೆ.
ನೀವಿಬ್ಬರೂ ಯಾಕೆ ಜತೆಯಾಗಿಲ್ಲ ಎಂದು ಕೇಳುತ್ತಾರೆ. ಈಕೆಯ ಸಲುವಾಗಿ ಹೊತ್ತಿಲ್ಲದ ಹೊತ್ತಿನಲ್ಲಿ ಕರೆಗಳು ಬರುತ್ತಿದ್ದವು. ನೋವು ಹಿಂಸೆ ತಾಳಲಾರದೇ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೆ ನ್ಯಾಯ ಬೇಕು. ನನ್ನ ತಾಯಿಗೆ ನೆಮ್ಮದಿ ಬೇಕು ಎಂದು ಕಾರುಣ್ಯ ಹೇಳಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಪ್ರಕರಣ: ಮತ್ತಿಬ್ಬರು ಖಾಸಗಿ ಗನ್‌ಮ್ಯಾನ್‌ಗಳ ಬಂಧನ
ಬಿಕ್ಕಿಬಿಕ್ಕಿ ಅತ್ತ ಸಮೃದ್ಧಿ ರಾಮ್: ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಕಾರುಣ್ಯ ಸಹೋದರಿ ಸಮೃದ್ಧಿ ನಾನು ಗ್ಯಾಂಬ್ಲಿಂಗ್‌ನಿಂದ ಹಣ ಕಳೆದುಕೊಂಡಿದ್ದು ನಿಜ. ಇದರಿಂದ ನಾನು ಮನೆಬಿಟ್ಟು ಬರಬೇಕಾಯಿತು. ಮೂರು ವರ್ಷಗಳಿಂದ ಫ್ಯಾಮಿಲಿಯಿಂದ ದೂರ ಇದ್ದೀನಿ ಎಂದು ಹೇಳುತ್ತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನನಗೆ ಸಾಲ ಕೊಟ್ಟವರು ನನ್ನ ಸ್ನೇಹಿತರೇ. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ನನ್ನ ಜೀವನದಲ್ಲೂ ಇದೇ ಆಗಿದೆ. ನಾನು 10, 5ರ ಹಾಗೆ ಬಡ್ಡಿಸಾಲ ತೆಗೆದುಕೊಳ್ಳುತ್ತಿದ್ದೆ. ನನ್ನ ಕ್ಲಾಸ್‌ಮೆಟ್ ಪ್ರತಿಭಾ ಕೂಡ ಸಾಲ ಕೊಟ್ಟಿದ್ದಳು. ನಾನು ತಪ್ಪದೇ ಬಡ್ಡಿ ಕೊಡುತ್ತಿದ್ದೆ. ನಮ್ಮ ಕುಟುಂಬವನ್ನು ಬೀದಿಗೆ ತರಬೇಕು ಎಂಬ ಉದ್ದೇಶ ಅವರದ್ದಾಗಿತ್ತು.
2023ರಲ್ಲಿ ನಾನು ಹಣ ಇಸಿದುಕೊಂಡಿದ್ದೆ. ಪ್ರತಿಭಾ, ಕಪಿಲ್ ಅಂತ ಯರ‍್ಯಾರಿದ್ದಾರೆ ಅವರಿಗೆ ನಾನು ದುಡ್ಡು ಕೊಡೋದು ಬೇಕಾಗಿರಲಿಲ್ಲ. ನನ್ನ ಮತ್ತು ನನ್ನ ಅಕ್ಕನ ಮರ್ಯಾದೆ ತೆಗೆಯಬೇಕು ಎಂದು ಮೊದಲೇ ಪ್ಲಾನ್ ಮಾಡಿದ್ದರು. ದಿನಾಲೂ ಅಶ್ಲೀಲ ಭಾಷೆ ಬಳಸಿ ಮೆಸೇಜ್ ಹಾಕುತ್ತಿದ್ದರು. ಅವೆಲ್ಲವೂ ನನ್ನ ಬಳಿ ಇವೆ. ನಾನು ಎಲ್ಲವನ್ನೂ ತೆಗೆದುಕೊಂಡು ಬರುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.























