ಬೆಳಗಾವಿ: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ, ವಿವಾದದಲ್ಲಿ ಆರ್‌ಸಿಯು

0
17

ಬೆಳಗಾವಿ: ಪಿಎಚ್‌ಡಿ ನೀಡದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.

ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸುಜಾತಾ ಪಿಎಚ್‌ಡಿ ಮಾಡಿದ್ದರು. ಆದರೆ ಇತ್ತೀಚಿಗೆ ಜರುಗಿದ ವಿವಿ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ಕೊಟ್ಟಿರಲಿಲ್ಲ. ಇದರಿಂದ ತೀವ್ರ ಮನನೊಂದ ಸುಜಾತಾ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ್, ರಿಜಿಸ್ಟರ್ ಸಂತೋಷ ಕಾಮೇಗೌಡ ಬೇಕೆಂದೇ ಪಿಎಚ್‌ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಪ್ರೊ. ಕೆಎಲ್‌ಎನ್ ಮೂರ್ತಿ ಈ ವಿದ್ಯಾರ್ಥಿನಿಗೆ ಗೈಡ್ ಮಾಡುತ್ತಿದ್ದರು. ಮೂರ್ತಿಯವರ ಕಿರುಕುಳ ಕುರಿತಾಗಿ ನಾನು ಈ ಹಿಂದೆ ಕುಲಪತಿ ಹಾಗೂ ರಿಜಿಸ್ಟರ್‌ಗೆ ದೂರು ನೀಡಿದ್ದೆ. ಅದರಂತೆ ಗೈಡ್ ಕಿರುಕುಳ ಸಮಸ್ಯೆ ಬಗೆಹರಿಸಲಾಗಿತ್ತು. ಆದರೆ ಇದೀಗ ನನಗೆ ಪಿಎಚ್‌ಡಿ ಪದವಿ ನೀಡಲಿಲ್ಲ. ಬೇಕೆಂದೇ ನನ್ನನ್ನು ಟಾರ್ಗೆಟ್ ಮಾಡಿ ಪಿಎಚ್‌ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪಿಸಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಗೊತ್ತಾಗಿದೆ. ಈ ಪ್ರಕರಣ ರಾಜ್ಯದ ಅಕಾಡೆಮಿಕ್ ವಲಯವನ್ನು ಬೆಚ್ಚಿಬೀಳಿಸಿದೆ.

ವಿವಿ ಸ್ಪಷ್ಟೀಕರಣ…!: ವಿದ್ಯಾರ್ಥಿನಿ ತಮ್ಮ ಮಾರ್ಗದರ್ಶಕ ಪ್ರೊ. ಕೆ.ಎಲ್.ಎನ್. ಮೂರ್ತಿ ವಿರುದ್ಧ ಕಿರುಕುಳದ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರವನ್ನು ಸಿಂಡಿಕೇಟ್ ಮುಂದಿಟ್ಟಿದ್ದು ಪ್ರಾಥಮಿಕ ವರದಿಯಲ್ಲಿ ಪ್ರೊ. ಮೂರ್ತಿ ಕಿರುಕುಳ ನೀಡಿರುವುದು ದೃಢಪಟ್ಟಿತ್ತು ಎಂದು ವಿವಿ ಕುಲಪತಿ ಸಿ.ಎಂ. ತ್ಯಾಗರಾಜ್ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರೊ. ಮೂರ್ತಿಯನ್ನು ಕೆಲಸದಿಂದ ಅಮಾನತು ಮಾಡುವಂತೆ ಸಿಂಡಿಕೇಟ್ ಆದೇಶ ಹೊರಡಿಸಿದೆ. ಕುಲಪತಿಯವರ ಪ್ರಕಾರ, ಅಮಾನತ್ತಿನ ನಂತರ ವಿದ್ಯಾರ್ಥಿನಿಯು ಲಿಖಿತವಾಗಿ ತಮ್ಮ ದೂರು ವಾಪಸ್ ಪಡೆದರು. ಇದರ ಹೊರತಾಗಿಯೂ “ಸಿಂಡಿಕೇಟ್ ಇದನ್ನು ಪುನಃ ಚರ್ಚೆಗೆ ತೆಗೆದುಕೊಂಡಿತ್ತು. ಪಿಎಚ್‌ಡಿ ಪ್ರಮಾಣಪತ್ರ ನೀಡುವ ಕುರಿತು ನಾವು ಮುಂದೆ ಬರಲು ಸಿದ್ಧರಾಗಿದ್ದೇವೆ” ಎಂದು ಕುಲಪತಿ ಸ್ಪಷ್ಟಪಡಿಸಿದರು. ಆದರೆ, ಸಿಂಡಿಕೇಟ್‌ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಗೆ ಪಿಎಚ್‌ಡಿ ಪ್ರದಾನ ಸಾಧ್ಯವಾಗಲಿಲ್ಲ.

Previous articleಬಾಡಿಗೆ ಮನೆಯಲ್ಲಿ ವೃದ್ಧ ದಂಪತಿ ಶವವಾಗಿ ಪತ್ತೆ
Next articleಆಳಂದಗೆ ಬಂದ್ರೆ ಮತಗಳ್ಳತನ ಪ್ರಕರಣ ಸಾಬೀತುಪಡಿಸುವೆ

LEAVE A REPLY

Please enter your comment!
Please enter your name here