ಬೆಳಗಾವಿ: ಬೆಳಗಾವಿ ನಗರದ ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆಯ ಟ್ರೇಡ್ ಲೈಸನ್ಸ್ ರದ್ದು ವಿಚಾರವಾಗಿ ಮಂಗಳವಾರ ಬೆಳಗ್ಗೆ ಉದ್ವಿಗ್ನತೆ ಸೃಷ್ಟಿಸಿತು. ಎಪಿಎಂಸಿ ಅಧಿಕಾರಿಗಳು ರೈತರನ್ನು ನೇರವಾಗಿ ಎಪಿಎಂಸಿ ಮಾರುಕಟ್ಟೆಗೆ ಉತ್ಪನ್ನ ತರುವಂತೆ ಸೂಚಿಸಿದಾಗ, ಅಲ್ಲಿದ್ದ ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಆದೇಶದಂತೆ ಟ್ರೇಡ್ ಲೈಸನ್ಸ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಲು ಪ್ರಯತ್ನಿಸಿದರು. ಆದರೆ ವ್ಯಾಪಾರಸ್ಥರು, “ಹಿರಿಯ ಅಧಿಕಾರಿಗಳು ನಮಗೆ ಇನ್ನೂ 48 ಗಂಟೆಗಳ ಕಾಲಾವಕಾಶ ನೀಡಿದ್ದಾರೆ. ಈ ಅವಧಿಯಲ್ಲಿ ರೈತರ ಹಾದಿ ತಡೆಯಲಾಗದು” ಎಂದು ಪಟ್ಟು ಹಿಡಿದರು.
ಈ ವೇಳೆ ಅಧಿಕಾರಿಗಳು ಹಾಗೂ ವರ್ತಕರ ನಡುವೆ ಮಾತಿನ ಚಕಮಕಿ, ವಾಗ್ವಾದ ಉಂಟಾಯಿತು. ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆಯೇ, ಜೈ ಕಿಸಾನ್ ಮಾರುಕಟ್ಟೆ ಪ್ರವೇಶದ್ವಾರದಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡರು. ಪ್ರತಿದಿನದಂತೆ ಹೆಚ್ಚಿನ ರೈತರು ಮಾರುಕಟ್ಟೆಗೆ ಬರುತ್ತಿರುವುದರಿಂದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರೆ, ವರ್ತಕರು ರೈತರನ್ನು ಒಳಗೆ ಕಳುಹಿಸುವುದರ ಮೇಲೆ ಪಟ್ಟು ಹಿಡಿದಿದ್ದಾರೆ. ಇದರ ಪರಿಣಾಮ, ಮಾರುಕಟ್ಟೆ ಪ್ರದೇಶದಲ್ಲಿ ತಾತ್ಕಾಲಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.