ಬಾಗಲಕೋಟೆ(ಕುಳಗೇರಿ ಕ್ರಾಸ್): ಅವಿಭಾಜ್ಯ ಜಿಲ್ಲೆಗಳಾಗಿದ್ದ ವಿಜಯಪುರ ಹಾಗೂ ಗದಗ ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿದ ಶತಮಾನ ಕಂಡ ಮಲಪ್ರಭಾ ನದಿಯ ಸೇತುವೆಗೆ ನಾವು ಕೋಟಿ ಕೋಟಿ ನಮನಗಳನ್ನ ಸಮರ್ಪಿಸಬೇಕು ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಗೋವನಕೊಪ್ಪ ಗ್ರಾಮದ ಮಲಪ್ರಭಾ ನದಿಯ ಶತಮಾನ ಕಂಡ ಸೇತುವೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ಈ ಸೇತುವೆಯ ಶತಮಾನ ಆಚರಿಸುತ್ತಿರುವುದು ನಮ್ಮ ಪುಣ್ಯ ಎಂಬುದನ್ನ ನಾವು ಮರೆಯಬಾರದು.
ಬ್ರಿಟಿಷರ ಆಡಳಿತ ಬೇರೆ ಬೇರೆಯಾಗಿದ್ದರೂ ಸಹ ಅವರು ಮಾಡುವಂತ ಕೆಲಸ ಶಾಶ್ವತ ಎಂಬುದನ್ನ ಅವರು ನಿರ್ಮಿಸಿದ ಈ ಸೇತುವೆಯ ಕಟ್ಟಡ ಎತ್ತಿ ತೋರಿಸುತ್ತದೆ. ಗಚ್ಚಿನಿಂದ ನಿರ್ಮಿಸಿದ ಈ ಸೇತುವೆ ಸಾವಿರಾರು ವರ್ಷಗಳು ಗತಿಸಿದರೂ ಶಾಶ್ವತವಾಗಿರುತ್ತವೆ. ಯುವ ಸಮುದಾಯ ಹೆಚ್ಚು ಗಮನಹರಿಸಿ ಇವುಗಳ ಜಿರ್ಣೋದ್ಧಾರ ಜೊತೆಗೆ ರಕ್ಷಿಸುವ ಕೆಲಸ ಮಾಡಬೇಕಿದೆ.
ಇದನ್ನೂ ಓದಿ: ಪುಣ್ಯಸ್ನಾನದಲ್ಲಿ ಪರಿಸರ ಜಾಗೃತಿ: ಕಡಲೆ ಹಿಟ್ಟಿನ ಪಾಕೇಟ್ ವಿತರಣೆ
ಗೋಡೆಗಳು ನಮ್ಮನ್ನು ಬೇರ್ಪಡಿಸುವ ಕೆಲಸ ಮಾಡಿದರೆ, ಸೇತುವೆಗಳು ನಮ್ಮನ್ನು ಸೇರಿಸುವ ಕೆಲಸ ಮಾಡುತ್ತವೆ. ಹಾಗಾಗಿ ನಾವೆಲ್ಲ ಸೇತುವೆಯಂತೆ ಬದುಕು ಸಾಗಿಸಬೇಕು ಎಂದು ಹೇಳಿದರು.
ಖಾನಾಪೂರ ತಾಲೂಕಿನ ಕನಕುಂಬಿ ಗ್ರಾಮದ ಸಂಹ್ಯಾದ್ರಿ ಪರ್ವತದಲ್ಲಿ ಉಗಮವಾದ ಮಲಪ್ರಭಾ ನದಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನದಿಯ ಉದ್ದಗಲಕ್ಕೂ ಇತಿಹಾಸ ಸಾರುವ ಶಿಲ್ಪಕಲೆಗಳು, ಸ್ಮಾರಕಗಳು ಇವೆ ಈಗಾಗಲೇ ಅವುಗಳನ್ನ ಸಂರಕ್ಷಿಸಲಾಗುತ್ತಿದೆ. ಹಾಗೆ ಸರ್ಕಾರ ಗಮನಹರಿಸಿ ಇಂತಹ ಸೇತುವೆಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.









