ನೀರಾವರಿ ನಿಗಮದ ದಿವ್ಯ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ; ಉತ್ತರ ಕರ್ನಾಟಕದ ನೂರಾರು ಗ್ರಾಮಗಳಿಗೆ ನೀರಿನ ಭವಣೆ ಭೀತಿ
ಬಾಗಲಕೋಟೆ: ಉತ್ತರ ಕರ್ನಾಟಕದ ಬ್ಯಾರೇಜ್‌ಗಳ ಮೇಲಿನ ನಿರ್ಲಕ್ಷ್ಯ ಮನೋಭಾವಕ್ಕೆ ಕರ್ನಾಟಕ ನೀರಾವರಿ ನಿಗಮ (KNNL) ಮತ್ತೊಮ್ಮೆ ಕಾರಣವಾಗಿರುವುದು ಇದೀಗ ಸ್ಪಷ್ಟವಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿರುವ ಗೇಟ್ ದುರಸ್ಥಿ ವೈಫಲ್ಯವೇ ಇದಕ್ಕೆ ತಾಜಾ ಉದಾಹರಣೆ.
ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.22ರಲ್ಲಿ ಉಂಟಾದ ಅವಘಡಕ್ಕೆ ಸಂಬಂಧಿಸಿದಂತೆ ನೀರು ಸೋರಿಕೆ ಸಮಸ್ಯೆ ಕಳೆದ ಹನ್ನೊಂದು ದಿನಗಳಿಂದ ನಿರಂತರವಾಗಿದ್ದರೂ, ಅದನ್ನು ಸಮರ್ಪಕವಾಗಿ ತಡೆಗಟ್ಟುವಲ್ಲಿ ನೀರಾವರಿ ನಿಗಮ ತೀವ್ರ ನಿರ್ಲಕ್ಷ್ಯ ತೋರಿದೆ. ಪರಿಣಾಮ ದಿನಂಪ್ರತಿ 100ರಿಂದ 200 ಕ್ಯುಸೆಕ್‌ವರೆಗೆ ನೀರು ಪೋಲಾಗುತ್ತಿದ್ದು, ಅಮೂಲ್ಯ ನೀರಿನ ನಷ್ಟ ಮುಂದುವರಿದಿದೆ.
ಇದನ್ನೂ ಓದಿ: ‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ
ತಜ್ಞರು ಬಂದರು, ಆದರೆ ಆದೇಶಗಳಿಲ್ಲ: ಗುಜರಾತ್ ಹಾಗೂ ಮಂಗಳೂರಿನಿಂದ ವಿಶೇಷ ಈಜು ತಜ್ಞರನ್ನು ಕರೆಸಿಕೊಂಡಿರುವುದು ನಿಜವಾದರೂ, ನೀರು ತಡೆಗಟ್ಟುವ ದುರಸ್ಥಿ ಕಾರ್ಯಕ್ಕೆ ಸಂಬಂಧಪಟ್ಟಂತೆ ಖಾಸಗಿ ಕಂಪನಿಗೆ ಯಾವುದೇ ಅಧಿಕೃತ ತ್ವರಿತ ಅಥವಾ ಅಲ್ಪಾವಧಿ ಟೆಂಡರ್ ಆದೇಶ ನೀಡದೇ ನಿಗಮ ಕೈಕಟ್ಟಿ ಕುಳಿತಿದೆ. ಇದರಿಂದ ಲಕ್ಷಾಂತರ ರೂಪಾಯಿ ವೆಚ್ಚವನ್ನು ಯಾರು ಭರಿಸಬೇಕು ಎಂಬ ಪ್ರಶ್ನೆಗೆ ಖಾಸಗಿ ಸಂಸ್ಥೆಗಳು ಸಹಜವಾಗಿಯೇ ಹಿಂದೆ ಸರಿದಿವೆ. ಇತ್ತ, ನೀರಾವರಿ ನಿಗಮದ ಅಧಿಕಾರಿಗಳು “ನಮಗೆ ಏನೂ ಗೊತ್ತಿಲ್ಲ” ಎಂಬಂತೆ ಕೈಚೆಲ್ಲಿ ಕುಳಿತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ನೋಡಿ: ‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ
ಕಾಟಾಚಾರಕ್ಕೆ ಸೀಮಿತವಾದ ವೀಕ್ಷಣೆ: ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಿಪ್ಪರಗಿ ಬ್ಯಾರೇಜ್‌ಗೆ ಭೇಟಿ ನೀಡಿ ಪತ್ರಿಕೆಗಳಿಗೆ ಹೇಳಿಕೆ ನೀಡಿ ಹೊರಟು ಹೋಗುವ ಕಾಟಾಚಾರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಯಾವುದೇ ಸ್ಪಷ್ಟ ಆದೇಶ, ಕಟ್ಟುನಿಟ್ಟಿನ ಸೂಚನೆ ಅಥವಾ ತುರ್ತು ಕಾರ್ಯಯೋಜನೆ ಇಲ್ಲದೆ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದೇ ಬ್ಯಾರೇಜ್ ಹಿನ್ನೀರಿನ ಮಟ್ಟ ಪಾತಾಳ ಮುಟ್ಟಲು ಕಾರಣವಾಗಿದೆ.
ಇದನ್ನೂ ಓದಿ: ಕೊನೆಗೂ ಟ್ರಂಪ್‌ಗೆ ‘ನೊಬೆಲ್’ ಸ್ಪರ್ಶ?
ತಾತ್ಕಾಲಿಕ ತಡೆ – ಶಾಶ್ವತ ಪರಿಹಾರವಲ್ಲ: ಐದು ದಿನಗಳ ಹಿಂದೆ ಸುಮಾರು 9 ಸಾವಿರ ಕ್ಯುಸೆಕ್ ನೀರು ಸೋರಿಕೆ ತಡೆಯುವ ಉದ್ದೇಶದಿಂದ ಗೇಟ್‌ನ ಪೆನಲ್‌ನ್ನು ಅದೇ ಹಳೆಯ ಸಾಮಗ್ರಿಗಳಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಆದರೆ ಇದರಿಂದಲೂ ನೀರು ಸೋರಿಕೆ ಸಂಪೂರ್ಣವಾಗಿ ನಿಲ್ಲದೆ ನಿರಂತರವಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಇನ್ನೂ ಕೂಡ ದುರಸ್ಥಿ ಕಾರ್ಯದಲ್ಲಿ ಯಾವುದೇ ಸ್ಪಷ್ಟ ಪ್ರಗತಿ ಕಾಣದಿರುವುದು ರೈತ ಸಮುದಾಯದಲ್ಲಿ ಭಾರೀ ಆತಂಕ ಮೂಡಿಸಿದೆ.
ಬೇಸಿಗೆಗೂ ಮುನ್ನವೇ ನೀರಿನ ಭವಣೆ: ಹಿಪ್ಪರಗಿ ಬ್ಯಾರೇಜ್‌ನ ನೀರಿನ ಮೇಲೆ ಅವಲಂಬಿತವಾಗಿರುವ ಬೇಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ನೂರಾರು ಪಟ್ಟಣಗಳು ಹಾಗೂ ಗ್ರಾಮಗಳು, ರೈತರು ಶೀಘ್ರದಲ್ಲೇ ನೀರಿನ ತೀವ್ರ ಕೊರತೆಯನ್ನು ಎದುರಿಸುವ ಭೀತಿಯಲ್ಲಿದ್ದಾರೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಬ್ಯಾರೇಜ್‌ನಲ್ಲಿ ಸುಮಾರು 6 ಟಿಎಂಸಿ ನೀರು ಸಂಗ್ರಹವಾಗಿರಬೇಕು. ಆದರೆ ಈ ಬಾರಿ ನೀರು ಕೇವಲ ಹಿಪ್ಪರಗಿವರೆಗೆ ಮಾತ್ರ ಇರುವುದಾಗಿ ತಿಳಿದುಬಂದಿದೆ. ಕಳೆದ 25 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಜನವರಿ ತಿಂಗಳಲ್ಲೇ ಇಷ್ಟೊಂದು ಕಡಿಮೆ ನೀರಿನ ಪ್ರಮಾಣ ದಾಖಲಾಗಿರುವುದು ರೈತರಲ್ಲಿ ಗಂಭೀರ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ: ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’
ಜನಪ್ರತಿನಿಧಿಗಳ ಮೌನ: ಉಭಯ ಜಿಲ್ಲೆಗಳ ಸಂಸದರು, ಶಾಸಕರು ಯಾವುದೇ ರೀತಿಯ ಕಾರ್ಯೋನ್ಮುಖ ಕ್ರಮ ಕೈಗೊಳ್ಳದೇ ಮೌನಕ್ಕೆ ಜಾರಿರುವುದು ಜನರಲ್ಲಿ “ಜಾಣ ಕುರುಡತನ”ದ ಅನುಮಾನವನ್ನು ಹುಟ್ಟಿಸಿದೆ. ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಬ್ಯಾರೇಜ್ ದುರಸ್ಥಿ ಕಾರ್ಯಕ್ಕೆ ಮುಂದಾಗಬೇಕಿದ್ದ ಸಂದರ್ಭದಲ್ಲಿ, ಹೊಣೆಗಾರಿಕೆ ತಪ್ಪಿಸುವ ಪ್ರವೃತ್ತಿಯೇ ಹೆಚ್ಚಾಗಿ ಕಾಣಿಸುತ್ತಿದೆ.
ಸೋರಿಕೆ ಮುಂದುವರಿಕೆ – ಪ್ರಶ್ನೆ ಒಂದೇ: ನೀರಾವರಿ ನಿಗಮ ಮತ್ತು ಜನಪ್ರತಿನಿಧಿಗಳ ಒಗ್ಗಟ್ಟಿನ ಮನೋಭಾವದ ವಿಫಲತೆಯಿಂದಾಗಿ ಗುರುವಾರವೂ ಸಹ ನೀರು ಸೋರಿಕೆ ತಡೆಯುವಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಈ ರೀತಿ ಪ್ರಖರವಾಗಿ ಕಾರ್ಯಾಚರಣೆಗಿಳಿಯದೇ ಇರುವುದರಿಂದ ನೀರು ಸೋರಿಕೆ ದಿನ ಉರುಳಿದಂತೆ ಮುಂದುವರಿಯುವ ಲಕ್ಷಣಗಳಿದ್ದು, “ಈ ಸೋರಿಕೆ ತಡೆಗಟ್ಟುವವರು ಯಾರು?” ಎಂಬ ಪ್ರಶ್ನೆಯೇ ದೊಡ್ಡದಾಗಿ ಎದುರಾಗಿದೆ.
ಇದನ್ನೂ ಓದಿ: ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ
ಒಟ್ಟಾರೆ, ಇಷ್ಟೊಂದು ಪ್ರಮಾಣದ ನಿರ್ಲಕ್ಷ್ಯತನದ ಕಾರ್ಯವೈಖರಿ ನೀರಾವರಿ ನಿಗಮಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಭಾಗದ ರೈತರು ಹಾಗೂ ಜನಸಾಮಾನ್ಯರು ಇಲಾಖೆ ಮತ್ತು ಸರ್ಕಾರದ ವಿರುದ್ಧ ರೊಚ್ಚಿಗೇಳುವ ಮೊದಲೇ ತಕ್ಷಣ ಸರಿಪಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇಲ್ಲವಾದಲ್ಲಿ, ದೊಡ್ಡ ಮಟ್ಟದ ಹೋರಾಟಗಳು ಮತ್ತು ಪ್ರತಿಭಟನೆಗಳು ಅನಿವಾರ್ಯವಾಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.





















