Home ನಮ್ಮ ಜಿಲ್ಲೆ ಬಾಗಲಕೋಟೆ ‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ

‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ

0
23

ಆಸ್ತಿ ದಾನಕ್ಕೆ ಮುಂದಾದ ಕಾರಣಕ್ಕೆ ಕೊಲೆ: ನಾಲ್ವರ ಬಂಧನ, ಮತ್ತಿಬ್ಬರಿಗಾಗಿ ತೀವ್ರ ಶೋಧ

ಬಾಗಲಕೋಟೆ: ಆಸ್ತಿಗಾಗಿ ಮಾನವೀಯತೆ ಮರೆತ ಅಮಾನವೀಯ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ‘ಮಹಾದಾನಿ’ಯೆಂದು ಪ್ರಸಿದ್ಧಿಯಾಗಿದ್ದ 80 ವರ್ಷದ ವೃದ್ಧೆ ಚಂದ್ರವ್ವ ನೀಲಜಗಿ ಅವರನ್ನು ಅವರದೇ ಕುಟುಂಬಸ್ಥರು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೌಟುಂಬಿಕ ಜೀವನದಿಂದ ದೂರವಿದ್ದು ಪಾರಲೌಕಿಕ ಬದುಕು ನಡೆಸುತ್ತಿದ್ದ ಚಂದ್ರವ್ವ, ನ್ಯಾಯಾಲಯದಿಂದ ತಮಗೆ ಬಂದ ಆಸ್ತಿಯನ್ನು ದೇವಸ್ಥಾನ ಹಾಗೂ ಅನ್ನದಾಸೋಹಕ್ಕೆ ದಾನ ಮಾಡುವುದಾಗಿ ನಿರ್ಧರಿಸಿದ್ದೇ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

30 ವರ್ಷಗಳ ಆಸ್ತಿ ವ್ಯಾಜ್ಯ: ಮೂಲತಃ ಜಗದಾಳ ಗ್ರಾಮದವರಾದ ಚಂದ್ರವ್ವ ನೀಲಜಗಿ, ತವರು ಮನೆಯ ಆಸ್ತಿ ಸಂಬಂಧ ಕಳೆದ 30 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ಎದುರಿಸುತ್ತಿದ್ದರು. ಇತ್ತೀಚೆಗೆ ನ್ಯಾಯಾಲಯವು ಸುದೀರ್ಘ ವಿಚಾರಣೆಯ ಬಳಿಕ ಸುಮಾರು 10 ಎಕರೆ ಭೂಮಿಯನ್ನು ಚಂದ್ರವ್ವಗೆ ನೀಡುವಂತೆ ಆದೇಶಿಸಿತ್ತು. ಈ ತೀರ್ಪನ್ನು ಸಹಿಸಲಾರದೆ ಕುಟುಂಬದ ಆರು ಮಂದಿ ಆಕೆಯ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಸಿನಿಮೀಯ ರೀತಿಯಲ್ಲಿ ಕೊಲೆ: ಕಳೆದ ಜನವರಿ 13ರಂದು, ತೇರದಾಳದಲ್ಲಿ ವಾಸವಾಗಿದ್ದ ಚಂದ್ರವ್ವ ಅವರು ಕಾರನ್ನು ಬಾಡಿಗೆ ಪಡೆದು, ಪರಿಚಯಸ್ಥರೊಬ್ಬರೊಂದಿಗೆ ಮೋಜಣಿ ಅಧಿಕಾರಿಗಳ ಜೊತೆ ಜಗದಾಳ ಗ್ರಾಮದಲ್ಲಿರುವ ತಮ್ಮ ಜಮೀನಿನ ಅಳತೆಗಾಗಿ ತೆರಳಿದ್ದರು. ಈ ವೇಳೆ ಯಾವುದೇ ಸಂಶಯ ಹುಟ್ಟದಂತೆ ಕುಟುಂಬಸ್ಥರು ಕಾಳಜಿ ತೋರಿಸಿದಂತೆ ನಟಿಸಿ, ಸಮೀಪದ ನೀರು ತುಂಬಿದ್ದ ಕೆನಾಲ್‌ಗೆ ಚಂದ್ರವ್ವ ಅವರನ್ನು ಬಲವಂತವಾಗಿ ನೂಕಿದ್ದಾರೆ.

ಇದನ್ನೂ ಓದಿ: ಕಾಲೆಳೆಯುವವರೇ ಜಾಸ್ತಿ ಇರುವಾಗ ಪಾದಗಳು ಸೇರುವುದಾದರೂ ಹೇಗೆ?

ನಂತರ ಅಜ್ಜಿಯನ್ನು ರಕ್ಷಿಸಿದಂತೆ ನಾಟಕವಾಡಿ ರಬಕವಿ–ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಂದ್ರವ್ವ ತಮ್ಮ ಜೊತೆಗಿದ್ದವರಿಗೆ “ನನಗೆ ಜೀವಭಯವಿದೆ, ಇವರಿಂದ ಕಾಪಾಡಿ” ಎಂದು ಮನವಿ ಮಾಡಿದ್ದಾಗಿ ತಿಳಿದು ಬಂದಿದೆ.

“ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕರೆದೊಯ್ಯುತ್ತೇವೆ” ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಬಳಿಕ ಅದೇ ದಿನ ರಾತ್ರಿ 8 ಗಂಟೆ ಸುಮಾರಿಗೆ ಗುರ್ಲಾಪೂರ ಸಮೀಪ ಕಾರಿನಲ್ಲಿ ಕತ್ತು ಹಿಚುಕಿ ಚಂದ್ರವ್ವ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಪುಣ್ಯಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳ ಸಾವು

‘ಮಹಾದಾನಿ’ ಚಂದ್ರವ್ವ: ಚಂದ್ರವ್ವ ಅವರು ತೇರದಾಳದಲ್ಲಿ ತರಕಾರಿ ಮಾರಾಟ ಮಾಡಿ ಸಂಗ್ರಹಿಸಿದ್ದ ಹಣದಿಂದ ಅಲ್ಲಮಪ್ರಭು ದೇವಸ್ಥಾನದ ದ್ವಾರಕ್ಕೆ ಬೆಳ್ಳಿ ಕವಚವನ್ನು ದೇಣಿಗೆಯಾಗಿ ನೀಡಿದ್ದರು. ಸುಮಾರು 20 ಕೆ.ಜಿ. ತೂಕದ, 22 ಲಕ್ಷ ರೂ. ಮೌಲ್ಯದ ಈ ಬೆಳ್ಳಿ ಕವಚವನ್ನು 2020ರ ಮಾರ್ಚ್ 3ರಂದು ಅನಾವರಣಗೊಳಿಸಲಾಗಿತ್ತು. ಇದೇ ಕಾರಣಕ್ಕೆ ಅವರು ‘ಮಹಾದಾನಿ’ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.

ದಾನ ಮಾಡುವ ನಿರ್ಧಾರವೇ ಕಾರಣ: ಮೂಲಗಳ ಪ್ರಕಾರ, ನ್ಯಾಯಾಲಯದಿಂದ ಬಂದ 10 ಎಕರೆ ಭೂಮಿಯನ್ನೂ ಅಲ್ಲಮಪ್ರಭು ದೇವಸ್ಥಾನದ ಅನ್ನದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ದಾನ ಮಾಡುವ ನಿರ್ಧಾರವನ್ನು ಚಂದ್ರವ್ವ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ಸಹೋದರರ ಮಕ್ಕಳ ಸಂಬಂಧಿಕರು ಆಕೆಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಅಂಕಣ ಬರಹ: ಗನ್ ಸಂಸ್ಕೃತಿ ಅಟ್ಟಹಾಸದಲ್ಲಿ ಬಳ್ಳಾರಿಗೆಲ್ಲಿದೆ ನೆಮ್ಮದಿ?

ನಾಲ್ವರ ಬಂಧನ, ಇಬ್ಬರಿಗಾಗಿ ಶೋಧ: ಈ ಪ್ರಕರಣವನ್ನು ಭೇದಿಸಿರುವ ಬನಹಟ್ಟಿ ಸಿಪಿಐ ಎಚ್.ಆರ್. ಪಾಟೀಲ, ಪಿಎಸ್‌ಐ ಶಾಂತಾಹಳ್ಳಿ ನೇತೃತ್ವದ ತಂಡ, ಪರಪ್ಪ ನೀಲಜಗಿ, ಸದಾಶಿವ ನೀಲಜಗಿ, ಶಂಕರೆಪ್ಪ ನೀಲಜಗಿ, ಸಿದ್ದಪ್ಪ ನೀಲಜಗಿ ಎಂಬ ನಾಲ್ವರನ್ನು ಬಂಧಿಸಿದೆ.
ಇನ್ನಿಬ್ಬರಾದ ಮಲ್ಲಪ್ಪ ನೀಲಜಗಿ ಹಾಗೂ ಶೋಭಾ ಪರಪ್ಪ ನೀಲಜಗಿ ಅವರ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.