‘ಮಹಾದಾನಿ’ ಅಜ್ಜಿ ಕೊಲೆ ರಹಸ್ಯ ಬಯಲು ಮಾಡಿದ ಅನಾಮಧೇಯ ಕರೆ

0
5

ಸಹಜ ಸಾವು ಎಂದು ಮುಚ್ಚಿಹಾಕಲು ಯತ್ನಿಸಿದ ಕುಟುಂಬಸ್ಥರ ನಡುವೆ, ಒಂದೇ ಕರೆ ಪೊಲೀಸರಿಗೆ ಕೊಟ್ಟ ಸುಳಿವು

ಬಾಗಲಕೋಟೆ / ತೇರದಾಳ: ‘ಮಹಾದಾನಿ’ ಎಂದೇ ಗುರುತಿಸಿಕೊಂಡಿದ್ದ ತೇರದಾಳ ಪಟ್ಟಣದ ಚಂದ್ರವ್ವ ಮಲ್ಲಪ್ಪ ನೀಲಜಗಿ (ಸುಮಾರು 80 ವರ್ಷ) ಅವರ ಸಾವು ಸಹಜವೆಂದು ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಕ್ಷಣದಲ್ಲೇ, ಒಂದು ಅನಾಮಧೇಯ ದೂರವಾಣಿ ಕರೆ ಇಡೀ ಪ್ರಕರಣಕ್ಕೆ ತಿರುವು ನೀಡಿದ್ದು, ಕೊನೆಗೆ ಅದು ಕ್ರೂರ ಕೊಲೆ ಎಂಬುದು ಸಾಬೀತಾಗಿದೆ.

ಅಜ್ಜಿ ಚಂದ್ರವ್ವಳ ಸಾವು ವಯೋಸಹಜ ಎಂದು ಎಲ್ಲರು ತಿಳಿದಿದ್ದರು. ಮೊದಲಿಗೆ ಯಾರಿಗೂ ಅನುಮಾನವೇ ಇರಲಿಲ್ಲ. ಪತಿ, ಮಕ್ಕಳು ಇಲ್ಲದ ಕಾರಣ ತವರು ಮನೆಯ ದೂರದ ಸಂಬಂಧಿಕರೇ ಅಂತ್ಯಕ್ರಿಯೆ ನಡೆಸುವುದು ಸಹಜ ಪ್ರಕ್ರಿಯೆಯಾಗಿತ್ತು. ಆದರೆ ಜ.13ರ ರಾತ್ರಿ 8 ಗಂಟೆ ಸುಮಾರಿಗೆ ಬನಹಟ್ಟಿ ಪೊಲೀಸ್ ಠಾಣೆಗೆ ಬಂದ ಅನಾಮಧೇಯ ಕರೆ, “ಈ ಸಾವು ಸಹಜವಲ್ಲ, ಇದು ಕೊಲೆ” ಎಂಬ ಮಾಹಿತಿ ನೀಡಿದ ನಂತರ ಪ್ರಕರಣದ ದಿಕ್ಕೇ ಬದಲಾಗಿದೆ.

ಇದನ್ನೂ ಓದಿ: ‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ ವಿಡಿಯೋ ನೋಡಿ‘ಮಹಾದಾನಿ’ ವೃದ್ಧೆ ಚಂದ್ರವ್ವ ಕೊಲೆ: ಕುಟುಂಬಸ್ಥರಿಂದಲೇ ಹತ್ಯೆ

ಅನಾಮಧೇಯ ಕರೆ ಬಳಿಕ ಪೊಲೀಸರ ತ್ವರಿತ ಕ್ರಮ: ಮಾಹಿತಿ ಲಭ್ಯವಾದ ತಕ್ಷಣ ಸಿಪಿಐ ಎಚ್.ಆರ್. ಪಾಟೀಲ ಹಾಗೂ ಪಿಎಸ್‌ಐ ಶಾಂತಾ ಹಳ್ಳಿ ಅವರು ಜಗದಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ರಬಕವಿ–ಬನಹಟ್ಟಿ ಸಮುದಾಯ ಆಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ, ವಯೋವೃದ್ಧೆಯ ಸಾವು ಸಹಜವಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ.

ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಪೊಲೀಸರು ಪ್ರಕರಣವನ್ನು ಕೊಲೆ ಎಂದು ದಾಖಲಿಸಿ, ಕೆಲವೇ ಗಂಟೆಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಮಲ್ಲಪ್ಪ ನೀಲಜಗಿಗಾಗಿ ಪ್ರತ್ಯೇಕ ಪೊಲೀಸ್ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

‘ಮಹಾದಾನಿ’ ಅಜ್ಜಿಯ ಜೀವನ: ತ್ಯಾಗ ಮತ್ತು ದಾನದ ಕಥೆ: ಚಂದ್ರವ್ವ ನೀಲಜಗಿ ಕೇವಲ ಒಬ್ಬ ವಯೋವೃದ್ಧೆಯಲ್ಲ, ತೇರದಾಳದ ಜನರಿಗೆ ಬದುಕಿನ ಪ್ರೇರಣೆ ಆಗಿದ್ದರು. ಕಳೆದ ಸುಮಾರು 60 ವರ್ಷಗಳ ಕಾಲ ತೇರದಾಳ ಮಾರುಕಟ್ಟೆಯ ಒಂದೇ ಸ್ಥಳದಲ್ಲಿ ಕುಳಿತು ಕಾಯಿಪಲ್ಲೆ ಮಾರಾಟ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಅವರು, ಸಂಪಾದಿಸಿದ ಹಣವನ್ನು ಸ್ವಾರ್ಥಕ್ಕೆಲ್ಲದೆ ಸಮಾಜದ ಒಳಿತಿಗಾಗಿ ಬಳಸಿದ್ದರು.

ಅವರು ತೇರದಾಳದ ಆರಾಧ್ಯ ದೈವ ಅಲ್ಲಮಪ್ರಭುದೇವರ ದೇವಸ್ಥಾನಕ್ಕೆ ಸುಮಾರು ₹30–40 ಲಕ್ಷ ರೂ.ಗಳಷ್ಟು ದಾನ ನೀಡಿ ಜೀರ್ಣೋದ್ಧಾರ ಕಾರ್ಯಕ್ಕೆ ಕಾರಣರಾಗಿದ್ದರು ಎಂಬುದು ತಿಳಿದು ಬಂದಿದೆ. ತಮ್ಮ ಜೀವನದ ಅರ್ಧ ಭಾಗವನ್ನು ಪಾರಮಾರ್ಥಿಕ ಸೇವೆಗೆ ಮುಡಿಪಾಗಿಟ್ಟಿದ್ದ ಅಜ್ಜಿ, “ನನ್ನ ಪಾಲಿನ ಆಸ್ತಿ ದೇವಾಲಯ ಹಾಗೂ ಅನ್ನದಾಸೋಹಕ್ಕೆ ಸೇರಬೇಕು” ಎಂದು ಪದೇಪದೇ ಹೇಳುತ್ತಿದ್ದರು.

ಇದನ್ನೂ ಓದಿ:  ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ

ಇದಲ್ಲದೆ, ನ್ಯಾಯಾಲಯದ ಮೂಲಕ ತಮ್ಮ ಹೆಸರಿನಲ್ಲಿದ್ದ ಸುಮಾರು 10 ಎಕರೆ ಭೂಮಿಯನ್ನು ದೇವಸ್ಥಾನ ಹಾಗೂ ಅನ್ನದಾಸೋಹಕ್ಕೆ ಮೀಸಲಿಡುವ ನಿರ್ಧಾರವನ್ನೂ ಅವರು ಪ್ರಕಟಿಸಿದ್ದರು ಎನ್ನಲಾಗಿದೆ.

ದೂರದ ಸಂಬಂಧಿಕರಿಂದಲೇ ದುರಂತ ಅಂತ್ಯ: ಸಮಾಜಸೇವೆಗೆ ಬದುಕು ಅರ್ಪಿಸಿದ್ದ, ಯಾರಿಗೂ ಹಾನಿ ಮಾಡದ ಈ ವೃದ್ಧೆಯು, ಕೊನೆಗೆ ತನ್ನದೇ ದೂರದ ಕುಟುಂಬಸ್ಥರ ಕೈಯಿಂದ ದುರಂತ ಅಂತ್ಯ ಕಂಡಿರುವುದು ಜನಮನವನ್ನು ಕಲಕಿದೆ. ಹಣ, ಆಸ್ತಿ ಮತ್ತು ದಾನದ ಹೆಸರಿನಲ್ಲಿ ನಡೆದ ಈ ಕ್ರೂರ ಕೃತ್ಯ, ಮಾನವೀಯ ಮೌಲ್ಯಗಳ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದೆ.

ಪೊಲೀಸ್ ತನಿಖೆಗೆ ಸಾರ್ವಜನಿಕ ಮೆಚ್ಚುಗೆ: ಸಹಜ ಸಾವು ಎಂದು ಮುಚ್ಚಿಹಾಕಲು ಯತ್ನಿಸಿದ್ದ ಪ್ರಕರಣವನ್ನು, ಒಂದು ಅನಾಮಧೇಯ ಕರೆಯ ಆಧಾರದಲ್ಲಿ ಪತ್ತೆ ಹಚ್ಚಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Previous articleಶತಮಾನ ಕಂಡ ಮಲಪ್ರಭಾ ಸೇತುವೆಗೆ ಗ್ರಾಮಸ್ಥರಿಂದ ಪೂಜೆ