Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ವಿವಾದಾತ್ಮಕ ಫ್ಲೆಕ್ಸ್ ತೆರವು, ಪ್ರಕರಣ ದಾಖಲು

ಬಾಗಲಕೋಟೆ: ವಿವಾದಾತ್ಮಕ ಫ್ಲೆಕ್ಸ್ ತೆರವು, ಪ್ರಕರಣ ದಾಖಲು

0

ಬಾಗಲಕೋಟೆ: ಈದ್ ಮಿಲಾದ್ ಪ್ರಯುಕ್ತ ಬಾಗಲಕೋಟೆ ನಗರದ ಪಂಕಾ ಮಸೀದಿ ಬಳಿ ಕಟ್ಟಲಾಗಿದ್ದ ವಿವಾದಾತ್ಮಕ ಫ್ಲೆಕ್ಸ್ ತೆರವುಗೊಳಿಸಲಾಗಿದ್ದು, ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಜಾಫರ್ ಹನುಮಸಾಗರ, ಇಸ್ಮಾಯಿಲ್ ಬಾಗೇವಾಡಿ ಹಾಗೂ ಇತರರ ವಿರುದ್ಧ ಶಹರ ಠಾಣೆಯಲ್ಲಿ ನಾಗೇಶ ಅಂಬಿಗೇರ ಎಂಬುವರು ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರ ಇತರ ವ್ಯಕ್ತಿಗಳ ಪತ್ತೆ ಮಾಡಲಾಗುತ್ತದೆ.‌

ಇಂಥ ಸೂಕ್ಷ್ಮ ವಿಚಾರದಲ್ಲಿ ಶಾಂತಿಗೆ ಧಕ್ಕೆ ತರುವ ಕೆಲಸವಾಗಬಾರದು. ಈ ವಿಷಯಕ್ಕೆ ಸಂಬಂಧಸಿದಂತೆ ಏನೇ ಮಾಹಿತಿಯಿದ್ದರೂ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಎಸ್ಪಿ ಸಿದ್ದಾರ್ಥ ಗೋಯಲ್ ಸಾರ್ವಜನಿಕರನ್ನು ಕೋರಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದ ಫ್ಲೆಕ್ಸ್: ಈದ್ ಮಿಲಾದ್ ಸಂದರ್ಭದಲ್ಲಿ ಕಟ್ಟಲಾಗಿದ್ದ ಫ್ಲೆಕ್ಸ್ ವಿವಾದಕ್ಕೆ ಕಾರಣವಾಗಿತ್ತು. ಹಮಾಸ್ ಉಗ್ರನನ್ನು ಬಿಂಬಿಸುವ ಚಿತ್ರ ಇರುವುದಕ್ಕೆ ಹಿಂದೂಪರ ಸಂಘಟನೆಗಳು ಆಕ್ಷೇಪಿಸಿದ್ದವು.
ಸೆ.9ರ ಮಂಗಳವಾರ ಬಾಗಲಕೋಟೆ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆ ಸ್ವಾಗತಿಸಲು ಪಂಕಾ ಮಸೀದಿ ಬಳಿ ಬೃಹದಾಕಾರದ ಫ್ಲೆಕ್ಸ್ ಕಟ್ಟಲಾಗಿತ್ತು.

ಅದರಲ್ಲಿ ಕಿಂಗ್ಸ್ ಆಫ್ ವರ್ಲ್ಡ್ ಎಂದು ಮುಸ್ಲಿಂ ರಾಜರುಗಳನ್ನು ಹೋಲಿಸುವ ಚಿತ್ರಗಳ ಜತೆಗೆ ಮಿಲ್ಟರಿ ವೇಷಧಾರಿಯಾಗಿರುವ ಕೈಗೆ ಪ್ಯಾಲೆಸ್ಟೇನ್ ಧ್ವಜ ಅಂಟಿರುವ ಹಮಾಸ್ ಉಗ್ರ ನಾಯಕನದು ಎನ್ನಲಾದ ಚಿತ್ರವನ್ನು ಹಾಕಲಾಗಿತ್ತು. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದವು.

ಕಟೌಟ್ ಗಮನಿಸಿ ಬುಧವಾರ ಸಂಜೆ ಶಹರ ಪೊಲೀಸ್‌ ಠಾಣೆಯಲ್ಲಿ ಜಮಾಯಿಸಿದ ಕಾರ್ಯಕರ್ತರು, ಫ್ಲೆಕ್ಸ್ ವಶಕ್ಕೆ ಪಡೆದುಕೊಳ್ಳಬೇಕು ಪ್ರತಿ ಬಾರಿ ಈದ್ ಮೆರವಣಿಗೆ ನೆಪದಲ್ಲಿ ಇಂಥ ದೃಷ್ಕೃತ್ಯಕ್ಕೆ ಕಾರಣವಾಗುತ್ತಿರುವವರನ್ನು ಪತ್ತೆ ಮಾಡಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಮುಖಂಡ ಗಿರೀಶ ಭಾಂಡಗೆ ಮಾತನಾಡಿ, “ಪಂಕಾಮಸೀದಿ ಬಳಿಯಲ್ಲಿ ಟಿಪ್ಪು ಸುಲ್ತಾನ್ ಚಿತ್ರದೊಂದಿಗೆ ಹಮಾಸ್ ನಾಯಕನ ಚಿತ್ರವನ್ನೂ ಹಾಕಲಾಗಿದೆ. ಕಳೆದ ಬಾರಿ ಮೆರವಣಿಗೆಯಲ್ಲಿ ಪ್ಯಾಲೆಸ್ಟೇನ್ ಧ್ವಜ ಹಾರಿಸಲಾಗಿತ್ತು. ಈಗ ಉಗ್ರನ ಭಾವಚಿತ್ರ ಹಾಕಲಾಗಿದೆ” ಎಂದು ಹೇಳಿದ್ದರು.

“ಇದು ಏನನ್ನು ಸೂಚಿಸುತ್ತದೆ? ಎಂಬುದಕ್ಕೆ ಪೊಲೀಸರು ಉತ್ತರಿಸಬೇಕು. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೆ ಲಿಖಿತ ದೂರು ನೀಡಿ ಎನ್ನುತ್ತಿದ್ದಾರೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು” ಎಂದು ಒತ್ತಾಯಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version