Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ಇಳಕಲ್‌ ಮಹಿಳೆಗೆ ನೈಜೀರಿಯನ್ ಆರೋಪಿ ದೋಖಾ

ಬಾಗಲಕೋಟೆ: ಇಳಕಲ್‌ ಮಹಿಳೆಗೆ ನೈಜೀರಿಯನ್ ಆರೋಪಿ ದೋಖಾ

0

ಬಾಗಲಕೋಟೆ: ಮ್ಯಾಟ್ರಿಮೋನಿ ವೆಬ್‌ಸೈಟ್ ಮುಖಾಂತರ ಭಾರತೀಯನ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಇಳಕಲ್‌ನ ಮಹಿಳೆಯನ್ನು ವಂಚಿಸಿದ್ದ ನೈಜೀರಿಯಾ ಮೂಲದ ಆರೋಪಿಯನ್ನು ಇಲ್ಲಿನ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನೈಜೇರಿಯಾ ದೇಶದ ಆಲಿವರ್ ಉಗ್ವು ಒಕೆಚುಕ್ವು (47) ಎಂದು ಗುರುತಿಸಲಾಗಿದೆ. ಈತ ಇಳಕಲ್‌ ಮೂಲದ ವಿಚ್ಛೇದಿತ ಮಹಿಳೆಗೆ ಸತ್ಯ ಅಮಿತ್ ಎನ್ನುವ ಹೆಸರಿನಿಂದ ಪರಿಚಯವಾಗಿದ್ದ. ಮೊದಲು ಸ್ನೇಹಿತನಾಗಿ ಪರಿಚಯ ಮಾಡಿಕೊಂಡು ನಂತರ ಮದುವೆಯಾಗುವುದಾಗಿ ನಂಬಿಸಿದ್ದ.

ತಾನು ಲಂಡನ್‌ನಲ್ಲಿ ವಾಸಿಸುತ್ತಿದ್ದು, ಭಾರತಕ್ಕೆ ಆಗಮಿಸಿದಾಗ 1 ಕೋಟಿ ಯುಎಸ್ ಡಾಲರ್‌ನ್ನು ದೆಹಲಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಅದನ್ನು ಬಿಡಿಸಿಕೊಳ್ಳಲು ಭಾರತದ ರೂಪಾಯಿ ಬೇಕೆಂದು ಆಕೆ ಕಡೆಯಿಂದ ಹಂತ, ಹಂತವಾಗಿ 5.55 ಲಕ್ಷ ರೂ.ಗಳನ್ನು ಹಾಕಿಸಿಕೊಂಡಿದ್ದಾನೆ.

ನಂತರ ಮೋಸ ಹೋಗಿರುವುದು ಅರಿವಾದ ತಕ್ಷಣ ನೊಂದ ಮಹಿಳೆ 2024ರ ಜನವರಿ ತಿಂಗಳಿನಲ್ಲಿ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಭಾರತೀಯ ವ್ಯಕ್ತಿಯ ಫೋಟೋವನ್ನೇ ಬಳಸಿಕೊಂಡು ತನ್ನ ಹೆಸರನ್ನು ಸತ್ಯ ಅಮಿತ್ ಎಂದು ಹೇಳಿಕೊಂಡಿದ್ದ ಆತ ಒಂದು ತಿಂಗಳ ಕಾಲ ಸಂಪರ್ಕದಲ್ಲಿದ್ದ. ವ್ಯಕ್ತಿ ನೈಜೀರಿಯಾ ಮೂಲದವನಾದರೂ ಮುಂಬೈನಲ್ಲಿ ವಾಸವಿದ್ದ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 4 ಮೊಬೈಲ್ ಫೋನ್, ಒಂದು ಲ್ಯಾಪ್‌ಟಾಪ್, ಪಾಸಪೋರ್ಟ್, ಯುಎಸ್ ಡಾಲರ್‌ನ ಕಂತೆಗಳನ್ನು ವಶಕ್ಕೆ ಪಡೆದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version