Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ಕೋರ್ಟ್ ಆದೇಶ, ಜಿಲ್ಲಾಧಿಕಾರಿ ಕಛೇರಿ ವಸ್ತುಗಳು ಜಪ್ತಿ

ಬಾಗಲಕೋಟೆ: ಕೋರ್ಟ್ ಆದೇಶ, ಜಿಲ್ಲಾಧಿಕಾರಿ ಕಛೇರಿ ವಸ್ತುಗಳು ಜಪ್ತಿ

0

ಬಾಗಲಕೋಟೆಯಲ್ಲಿ ಪುನರ್ವಸತಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರಧನ ವಿತರಿಸಲು ನ್ಯಾಯಾಲಯದ ಆದೇಶವಿದ್ದರೂ ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಜರುಗಿದೆ.

ರೈತರಾದ ರೇವಣಸಿದ್ದಯ್ಯ ಮಠಪತಿ, ಬಸವರಾಜ ಮಠಪತಿ, ಕೃಷ್ಣಾ ಜೀರಗಾಳ ಅವರ ಜಮೀನುಗಳಿಗೆ ಸಂಬಂಧಿಸಿದಂತೆ ಅಂದಾಜು 170 ಕೋಟಿ ರೂ.ಗಳನ್ನು ನೀಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ಆದರೆ ಅದರ ಪಾಲನೆಯಾಗದ ಹಿನ್ನೆಲೆಯಲ್ಲಿ ಐದನೇ ಹೆಚ್ಚುವರಿ ನ್ಯಾಯಾಲಯದಿಂದ ಜಪ್ತು ಆದೇಶ ತಂದು ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ವಸ್ತುಗಳನ್ನೇ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಆರ್.ಎಸ್.ಬಸಣ್ಣವರ, ಆರ್.ಬಿ.ದ್ಯಾಮಣ್ಣವರ ವಕಾಲತ್ತು ವಹಿಸಿದ್ದರು ಅವರ ಸಮ್ಮುಖದಲ್ಲಿ ಜಪ್ತಿ ಕಾರ್ಯ ಜರುಗಿತು. ನವನಗರ ಮೂರನೇ ಯೂನಿಟ್‌ಗಾಗಿ ರೈತರು ಜಮೀನು ಕಳೆದುಕೊಂಡಿರುವ ಪ್ರಕರಣ ಇದಾಗಿದೆ.

ನವನಗರ ಮೂರನೇ ಯೂನಿಟ್‌ಗಾಗಿ ಒಟ್ಟು 1600 ಎಕರೆಯನ್ನು ಭೂಸ್ವಾಧೀನಪಡಿಸಿಕೊಂಡು ಬಿಟಿಡಿಎ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದ್ದು, ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಪರಿಹಾರ ಮೊತ್ತ ಸಿಗದ ಕಾರಣ ಬಹುತೇಕ ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದೇ ಪ್ರದೇಶಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಇತ್ತೀಚೆಗೆ ಬಿಟಿಡಿಎ ಆವರಣದಲ್ಲಿನ ಎಸ್‌ಎಲ್‌ಒ ಕಚೇರಿಯನ್ನೂ ಜಪ್ತಿ ಮಾಡಿ ಬೀಗ ಜಡಿಯಲಾಗಿತ್ತು. ಹೊಸ ಯುಪಿಎ ಕಾಯ್ದೆ ಪ್ರಕಾರ ನಗರ ವ್ಯಾಪ್ತಿಯಲ್ಲಿದ್ದರೆ ಎರಡರಷ್ಟು ಪರಿಹಾರ ವಿತರಿಸಬೇಕೆಂದು ಇದೆ. ಅದರ ಜತೆಗೆ ವಾರ್ಷಿಕ ಬಡ್ಡಿಯನ್ನು ಸೇರಿಸಿ ನೀಡಬೇಕೆಂದು ಇದ್ದು, ಆ ಪ್ರಕಾರ ಹಲವು ಪ್ರಕರಣಗಳಲ್ಲಿ ಎಕರೆಗೆ 22 ರಿಂದ 23 ಕೋಟಿ ರೂ.ಗಳವರೆಗೆ ಆದೇಶವಾಗಿರುವ ಉದಾಹರಣೆ ಇದೆ. ಪರಿಹಾರ ಪಾವತಿಸಲು ಸಾಧ್ಯವಾಗದ ಕಾರಣ ಹಲವು ಪ್ರಕರಣಗಳಲ್ಲಿ ನ್ಯಾಯಾಂಗ ನಿಂದನೆ ದಾವೆಯನ್ನೂ ಹೂಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version