ಅಭಯ ಮನಗೂಳಿ
ಬಾಗಲಕೋಟೆ ಭಾಗದ ಜನಪ್ರತಿನಿಧಿಗಳ ಭಾರಿ ವಿರೋಧದ ನಡುವೆಯೂ ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಮಿಶ್ರ ವಿವಿಯನ್ನಾಗಿಸಲು ನಿವೃತ್ತ ಐಎಎಸ್ ಅಧಿಕಾರಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹೀಗಾಗಿ ಏಕಮಾತ್ರ ತೋವಿವಿ ಅಸ್ತಿತ್ವಕ್ಕೆ ಸಂಚಕಾರ ಬರುವ ಆತಂಕ ಆರಂಭವಾಗಿದೆ.
ಈ ಮೊದಲು ಕೃಷಿ ವಿಶ್ವವಿದ್ಯಾಲಯಗಳಿದ್ದವು. ಆದರೆ ಕೃಷಿಗಿಂತಲೂ ತೋಟಗಾರಿಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಾಗ ವಿಶೇಷವಾದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿದ್ದ ಸರ್ಕಾರ 2009ರಲ್ಲಿ ಬಾಗಲಕೋಟೆಯಲ್ಲಿ ವಿವಿಯನ್ನು ಆರಂಭಿಸಿತು. ಮುಳುಗಡೆಯಿಂದ ತತ್ತರಿಸಿ ಹೋಗಿದ್ದ ಬಾಗಲಕೋಟೆಗೆ ವಿವಿ ಬಂದಿದ್ದು ಸಂತ್ರಸ್ತರಲ್ಲಿ ಸಂತಸಕ್ಕೆ ಕಾರಣವಾಗಿತ್ತು. ಆದರೆ ಮೇಲಿಂದ ಮೇಲೆ ವಿವಿ ಅಸ್ತಿತ್ವಕ್ಕೆ ಸಂಚಕಾರ ತರುವ ಹುನ್ನಾರಗಳು ನಡೆದಿವೆ.
ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ತುರ್ತಾಗಿ ವಿವಿ ಪರ ಧ್ವನಿಯಾಗದಿದ್ದರೆ ಸಾಮಾನ್ಯ ವಿವಿಗಳಂತೆ ಈ ವಿವಿಯೂ ಕಳೆದು ಹೋಗಲಿದೆ. ವಿವಿ ಆಡಳಿತದ ಹಿಡಿತ ಬಾಗಲಕೋಟೆಯಿಂದ ಬೆಂಗಳೂರಿಗೆ ವರ್ಗಾವಣೆ ಆಗಲಿದೆ. ಅಂಥದೊಂದು ಲಾಬಿ ಕೂಡ ಇದರ ಹಿಂದೆ ಕೆಲಸ ಮಾಡುತ್ತಿರುವ ಆರೋಪಗಳು ತೀವ್ರವಾಗಿ ಕೇಳಿಬಂದಿವೆ.
ಕೃಷಿ ವಿವಿಗೆ ಮೊದಲಿನಷ್ಟು ಆದ್ಯತೆ ಉಳಿದಿಲ್ಲ. ಅಲ್ಲದೇ ಮಂಡ್ಯ ಸಮಗ್ರ ವಿವಿ ಆರಂಭದ ನಂತರ ಬೆಂಗಳೂರು ವಿವಿ ಮಹತ್ವ ಕಳೆದುಕೊಳ್ಳುವ ಆತಂಕವಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ವಿವಿಗಳನ್ನು ಮಿಶ್ರ ವಿವಿಯನ್ನಾಗಿಸಿ ಬೆಂಗಳೂರು ಮಟ್ಟದಲ್ಲೇ ಹಿಡಿತ ಸಾಧಿಸುವ ಪ್ರಯತ್ನಗಳು ನಡೆದಿವೆ. ಅದರ ಭಾಗವಾಗಿ ಕೃಷಿಯೊಂದಿಗೆ ತೋಟಗಾರಿಕೆ, ಅರಣ್ಯ ರೇಷ್ಮೆ, ಕೃಷಿ ವಿಷಯಗಳನ್ನು ಒಳಗೊಂಡ ವಿವಿಯನ್ನು ಜಿಲ್ಲಾವಾರು ವ್ಯಾಪ್ತಿಗೆ ಸೀಮಿತಗೊಳಿಸುವ ರೀತಿಯಲ್ಲಿ 6 ವಿವಿಗಳನ್ನು ಆರಂಭಿಸಲು ವಿಜಯಭಾಸ್ಕರ ಸಮಿತಿ ಶಿಫಾರಸು ಮಾಡಿದೆ.
ಈ ಶಿಫಾರಸನ್ನು ಸರ್ಕಾರ ಜಾರಿಗೊಳಿಸಲು ಮುಂದಾದಲ್ಲಿ ಸದ್ಯ 26 ಜಿಲ್ಲೆಯ ವ್ಯಾಪ್ತಿ ಹೊಂದಿರುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿ ಬಾಗಲಕೋಟೆ, ವಿಜಯಪುರ ಜಿಲ್ಲೆಗಳು, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಯ ಭಾಗಶಃ ಭಾಗಗಳಿಗಷ್ಟೇ ಸೀಮಿತವಾಗಲಿದೆ. ಅಲ್ಲದೇ 16 ವರ್ಷ ನಿರಂತರ ಶ್ರಮವಾಗಿ ಅಭಿವೃದ್ಧಿಪಡಿಸಿರುವ 12 ಸಂಶೋಧನಾ ಕೇಂದ್ರಗಳು ಸಹ ಬೇರೆ ವಿವಿಗಳಿಗೆ ಹರಿದು ಹಂಚಿಹೋಗಲಿವೆ. ಒಟ್ಟಾರೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ “ಹಲ್ಲು ಕಿತ್ತಿದ ಹಾವಿನಂತೆ” ಆಗಲಿದೆ.
ಈ ಕುರಿತು ಮಾತನಾಡಿರುವ ಎಂಎಲ್‌ಸಿ ಹಣಮಂತ ನಿರಾಣಿ, “ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಕುತ್ತು ತರುವ ಪ್ರಯತ್ನ ನಿಲ್ಲಬೇಕು. ತೋಟಗಾರಿಕೆಗಾಗಿಯೇ ವಿಶೇಷವಾಗಿ ಸ್ಥಾಪನೆಗೊಂಡಿರುವ ಈ ವಿವಿ ಸಾಕಷ್ಟು ಪದವೀಧರರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಈಗ ಸಮಗ್ರ ವಿವಿಗೆ ಸೇರಿಸುವುದರಿಂದ ವಿವಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ. ಸರ್ಕಾರ ಸದನದಲ್ಲಿ ಪ್ರಯತ್ನ ಕೈಬಿಡುವುದಾಗಿ ಹೇಳಿ ಸಮಿತಿಯಿಂದ ಈ ರೀತಿ ವರದಿ ಪಡೆದಿರುವುದು ಆಶ್ಚರ್ಯ ಮೂಡಿಸಿದೆ” ಎಂದು ಹೇಳಿದ್ದಾರೆ.