ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ: ನೇಕಾರ ಉದ್ಯಮವೇ ಇಲ್ಲದ ಪ್ರದೇಶಗಳಲ್ಲಿ ಸಾವಿರ ಎಕರೆಯಲ್ಲಿ ಜವಳಿ ಪಾರ್ಕ್ ನಿರ್ಮಿಸುವಲ್ಲಿ ಒಲವು ತೋರಿಸುತ್ತಿರುವ ಸರ್ಕಾರ, ಸಂಪೂರ್ಣ ನೇಕಾರರಿಂದಲೇ ಕೂಡಿರುವ ರಬಕವಿ-ಬನಹಟ್ಟಿ ತಾಲೂಕಿಗೆ ಮಾರಕವಾಗಿದೆ.
ಕಳೆದ 15 ವರ್ಷಗಳ ಹಿಂದೆಯೇ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮವು ನೂರಾರು ಎಕರೆಯಷ್ಟು ಜಾಗೆಯನ್ನು ರಬಕವಿ-ಬನಹಟ್ಟಿ, ಮದನಮಟ್ಟಿ ಹೀಗೆ ಹಲವೆಡೆ ನಮೂದಿಸಿದೆ. ಆದರೆ ಇಂದಿನವರೆಗೂ ಯಾವದೇ ಯೋಜನೆಗಳನ್ನು ರೂಪಿಸದೆ ಮೂಲ ಸೌಲಭ್ಯವನ್ನೇ ನಿಗಮ ಮರೆತಿರುವದು ಸೋಜಿಗದ ಸಂಗತಿ.
ಲಕ್ಷಕ್ಕೂ ಅಧಿಕ ನೇಕಾರರು: ತೇರದಾಳ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೇಕಾರರಿದ್ದು, ಶಾಸಕ, ಸಂಸದರ ಆಯ್ಕೆಗೆ ನಿರ್ಣಾಯಕ ಮತಗಳಾಗಿರುವ ಸಮುದಾಯ ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಕಡೆಗಣನೆ ಮುಂದುವರೆದಿದೆ. ಕೆಎಚ್‌ಡಿಸಿ ಹೊರತುಪಡಿಸಿ 50 ವರ್ಷಗಳಿಂದ ಯಾವುದೇ ನೇಕಾರ ಸಂಬಂಧಿಸಿದ ಘಟಕಗಳಾಗಿಲ್ಲ. ಪ್ರತಿ ಬಜೆಟ್‌ನಲ್ಲಿ ನೇಕಾರರ ಬೇಡಿಕೆಗಳು ಬೇಡಿಕೆಗಳಾಗಿಯೇ ಮುನ್ನಡೆಯುತ್ತಿದ್ದು, ಕಾಟಾಚಾರಕ್ಕೆಂಬಂತೆ ಕೆಲ ಯೋಜನೆಗಳನ್ನು ತೆರೆದು ಗಾಯಕ್ಕೆ ಮುಲಾಮು ಹಚ್ಚುವ ಕಾರ್ಯ ಮಾತ್ರ ನಿರಂತರವಾಗಿದೆ.
ನೇಕಾರರ ಅಭಿವೃದ್ಧಿಗೆ ಇರುವ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಮಗದಿಂದ ಯಾವದೇ ಪ್ರಯೋಜನ ತೇರದಾಳ ಕ್ಷೇತ್ರಕ್ಕೆ ಆಗಿಲ್ಲ. ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಭಾಗದ ನೇಕಾರರ ಸಂಕಷ್ಟ ಅರಿಯದೇಯಿರುವದು ಪ್ರಮುಖ ಕಾರಣವಾಗಿದ್ದರೆ, ಹೋರಾಟದಲ್ಲಿರದ ಅಸಂಘಟಿತ ವಲಯವೆಂಬ ಕಾರಣ ಮತ್ತೊಂದಾಗಿದೆ.
ಕೋನ್ ಡೈಯಿಂಗ್ ಇಲ್ಲ: 20 ವರ್ಷಗಳ ಹಿಂದೆಯೇ ನಗರಸಭೆ ಅಧೀನದಲ್ಲಿ 2 ಎಕರೆಯಷ್ಟು ಪ್ರದೇಶದಲ್ಲಿ ಕೋನ್ ಡೈಯಿಂಗ್ ಘಟಕ ಸ್ಥಾಪನೆಗೆ ಸರ್ವೆ ನಂ. 64ರಲ್ಲಿ ಜಾಗೆ ಮೀಸಲಿಟ್ಟಿದ್ದಾರೆ. ಇದೀಗ ಮುಳ್ಳು-ಕಂಟೆಗಳಿಂದ ಮುಚ್ಚಿ ಹೋಗಿದ್ದು, ಜಾಗೆ ಗುರುತು ಸಿಗಲಾರದಷ್ಟು ಹದಗೆಟ್ಟಿದೆ. ಇನ್ನೊಂದೆಡೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಸಹಾಯ ಧನ ವಿಳಂಬದಿಂದ ನೇಕಾರರು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದ್ದು, ಸರಳಿಕರಣ ನೀತಿ ವಿಳಂಬದಿಂದ ನೇಕಾರರು ಬೀದಿ ಪಾಲಾಗಿದ್ದಾರೆ.
ಕ್ಷೇತ್ರ ವ್ಯಾಪ್ತಿ ಹಲವಾರು ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ನೇಕಾರ ಅಭಿವೃದ್ಧಿಗೆ ಜಾಗೆ ಗುರ್ತಿಸಿದೆ. ಅದರಷ್ಟೇ ಪ್ರಬಲವಾಗಿ ಜವಳಿ ಇಲಾಖೆಗಳ ಆಯಾ ನಿಗಮಗಳು ಪುನಶ್ಚೇತನ ಅಥವಾ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ತೀವ್ರ ನಿರ್ಲಕ್ಷö್ಯವೇ ಕಾರಣವಾಗಿದ್ದು, ಇವೆಲ್ಲದರ ವಿರುದ್ಧ ಬೃಹತ್ ಹೋರಾಟ ನಮ್ಮದಾಗುವುದೆಂದು ನೇಕಾರ ಸಂಘಟನೆಗಳು ಒಕ್ಕೊರಲಿನಿಂದ ತಿಳಿಸಿವೆ.
ದಿನದಿಂದ ದಿನಕ್ಕೆ ನೇಕಾರರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಪೂರಕ ಸೌಲಭ್ಯ ಹಾಗೂ ಸಮರ್ಪಕ ವೇತನ ದೊರಕದ ಕಾರಣ ವಿದ್ಯುತ್ ಮಗ್ಗಗಳ ನೇಕಾರ ಕುಟುಂಬ ನಿರ್ವಹಣೆ ಸಮಸ್ಯೆಯಾಗಿದ್ದರೆ, ಮತ್ತೊಂದೆಡೆ ಜಾಗತೀಕರಣ ಭರಾಟೆಯಲ್ಲಿ ರಬಕವಿ-ಬನಹಟ್ಟಿ ಸೀರೆಗಳ ಖರೀದಿಯಲ್ಲಿಯೂ ತೀವ್ರ ಕುಸಿತ ಕಂಡಿದೆ. ಇವೆಲ್ಲದರ ಮಧ್ಯ ಸರ್ಕಾರ ಮಧ್ಯಪ್ರವೇಶವಾಗದೆ, ನೇಕಾರರ ಸಂಕಷ್ಟಕ್ಕೆ ಸ್ಪಂದಿಸದಿರುವುದು ಸೋಜಿಗದ ಸಂಗತಿ.
“ಜವಳಿ ಕ್ಷೇತ್ರ ಅತ್ಯಂತ ದಯನೀಯವಾಗಿದ್ದು, ಗುಳೇ ಹೋಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಸಕಲ ರೀತಿಯಲ್ಲಿ ಸ್ಪಂದನೆಯಾಗದಿದ್ದಲ್ಲಿ ಮುಂದಿನ ದಿನಗಳು ಭಯಾನಕವಾಗಿವೆ.” ಎಂದು ನೇಕಾರ ಮುಖಂಡ ಶಂಕರ ಜುಂಜಪ್ಪನವರ ಹೇಳಿದ್ದಾರೆ.
“ಮದಲಮಟ್ಟಿಯಲ್ಲಿ 5 ಎಕರೆ, ರಬಕವಿಯಲ್ಲಿ 2 ಎಕರೆಯಷ್ಟು ಪ್ರದೇಶವಿದೆ. ಜವಳಿಗೆ ಪೂರಕ ಯೋಜನೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ನೇಕಾರರ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೇನೆ. ನೇಕಾರರಿಂದಲೇ 4 ಬಾರಿ ಚುನಾಯಿತನಾಗಿದ್ದು, ಪೂರಕ ಸ್ಪಂದನೆಯೊಂದಿಗೆ ಪಾರದರ್ಶಕ ನ್ಯಾಯ ಒದಗಿಸುವ ಜವಾಬ್ದಾರಿ ನನ್ನದು.” ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.