ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಗೊಂದಲದಿಂದಾಗಿ ರಾಜ್ಯದ ಜನ ಒಂದು ರೀತಿಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ. ಡಿಸಿಎಂ ಹುದ್ದೆ ಚರ್ಚೆ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಬಿಟ್ಟು ಸಭೆ ಮಾಡುವಂತಹ ಕೆಟ್ಟ ಸ್ಥಿತಿಗೆ ಇವರು ತಲುಪಿದ್ದಾರೆ. ಕೇವಲ ಆರು ತಿಂಗಳ ರಾಜ್ಯದ ಆಡಳಿತ ಹದಗೆಟ್ಟಿದೆ. ಆಡಳಿತದ ಕಡೆ ಗಮನ ಇಲ್ಲ. ಗ್ಯಾರಂಟಿಗಳಲ್ಲಿ ಹಲವು ನಿಯಮಗಳಿಂದ ಗೊಂದಲ. ಬಸ್ ಕಡಿಮೆ ಮಾಡಿದ್ದಾರೆ. ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಇದನ್ನೆಲ್ಲ ಮರೆಮಾಚಲು ಹುಲಿ ಉಗುರು ಪತ್ತೆ, ಡ್ರಾಮಾ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಕೆಡವಲು ಬಿಜೆಪಿ ಮುಂದಾಗಿದೆ ಎಂಬುದು ಸರಿಯಲ್ಲ. ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾದವರು ಮಾತನಾಡುವಾಗ ಸ್ಪಷ್ಟತೆ ಇರಬೇಕು. ಡಿಸಿಎಂ ಹೆಚ್ಚಳ ಮಾಡಿ ಡಿ.ಕೆ.ಶಿವಕುಮಾರ ಅವರ ಪ್ರಭಾವ ಕಡಿಮೆ ಮಾಡಲು ಮುಂದಾಗಿದ್ದಾರೆ. ತಮ್ಮ ಶಾಸಕರನ್ನು ಒಟ್ಟಾಗಿ ಇಡಲು ವಿಫಲರಾಗಿದ್ದಾರೆ. ಹೀಗಾಗಿ ಇಬ್ಬರ ಜಗಳ ತಾರಕಕ್ಕೇರಿದೆ. ಇದನ್ನು ಮರೆ ಮಾಚಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.